ಕುಂಬಳೆ: ನಾಯ್ಕಾಪು ನಿವಾಸಿಯೂ ಕಾಸರಗೋಡು ಬಾರ್‌ನ ನ್ಯಾಯವಾದಿಯಾದ ಚೈತ್ರಾ ಎಂಬವರ ಮನೆಯಿಂದ 29 ಪವನ್ ಚಿನ್ನ, 25 ಸಾವಿರ ರೂ.ಗಳ ಬೆಳ್ಳಿ ಆಭರಣಗಳು, ೫ ಸಾವಿರ ರೂಪಾಯಿಗಳನ್ನು ಕಳವು ನಡೆಸಿದ ಪ್ರಕರಣದಲ್ಲಿ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಕರ್ನಾಟಕ ನಿವಾಸಿಯೂ, ಕಾಸರಗೋಡು, ಕುಂಬಳೆ ಪೊಲೀಸ್ ಠಾಣೆಯ ವಿವಿಧ ಸ್ಥಳಗಳ ಕ್ವಾರ್ಟರ್ಸ್‌ನಲ್ಲಿ ವಾಸಿಸುವ ಇಬ್ರಾಹಿಂ ಯಾನೆ ಕಲಂದರ್ ಇಬ್ರಾಹಿಂ ಎಂಬಾ ತನನ್ನು ಕರ್ನಾಟಕದಿಂದ ಕುಂಬಳೆ ಪೊಲೀಸ್ ಇನ್‌ಸ್ಪೆಕ್ಟರ್ ಟಿ.ಕೆ. ಮುಕುಂದನ್, ಎಸ್‌ಐ ಕೆ.ಶ್ರೀಜೇಶ್ ಎಂಬಿವರ ನೇತೃತ್ವದಲ್ಲಿರುವ ಪ್ರತ್ಯೇಕ ತನಿಖಾ ತಂಡ ಬಂಧಿಸಿದೆ. ಬಳಿಕ ಕಾಸರ ಗೋಡಿಗೆ ತಲುಪಿಸಿದ ಆರೋಪಿ ಯನ್ನು ಗುಪ್ತ ಕೇಂದ್ರದಲ್ಲಿರಿಸಿ ತನಿಖೆ ನಡೆಸಲಾಗುತ್ತಿದೆ. ಈತನ ಬಂಧನದೊಂ ದಿಗೆ ಇನ್ನೂ ಹಲವು ಕಳವು ಪ್ರಕರಣ ಗಳಲ್ಲಿ ಮಾಹಿತಿ ಲಭಿಸಲಿದೆಯೆಂದು ಪೊಲೀಸರು ನಿರೀಕ್ಷೆ ವ್ಯಕ್ತಪಡಿಸಿದ್ದಾರೆ.
ಕಳೆದ ಆದಿತ್ಯವಾರ ಸಂಜೆ 6 ಗಂಟೆಯಿಂದ ರಾತ್ರಿ 8 ಗಂಟೆ ಮಧ್ಯೆ ಚೈತ್ರರ ಮನೆಯಿಂದ ಕಳವು ನಡೆದಿದೆ. ಚೈತ್ರ ಹಾಗೂ ಕುಟುಂಬ ಕಣಿಪುರ ಕ್ಷೇತ್ರ ಜಾತ್ರೆಗೆ ಹೋದ ಸಂದರ್ಭದಲ್ಲಿ ಮನೆಯ ಹಿಂಭಾಗದ ಬಾಗಿಲು ಮುರಿದು ಕಳ್ಳರು ಒಳಗೆ ನುಗ್ಗಿ ಕಪಾಟಿನಲ್ಲಿದ್ದ ಚಿನ್ನ, ಬೆಳ್ಳಿ ಆಭರಣಗಳು ಹಾಗೂ ಹಣವನ್ನು ದೋಚಿದ್ದಾರೆ. ನಾಯ್ಕಾಪು ಹಾಗೂ ಪರಿಸರ ಪ್ರದೇಶದ ಹಲವು ದೃಶ್ಯಗಳನ್ನು ಪರಿಶೀಲಿಸಿ ತನಿಖಾ ತಂಡ ಕಳವು ಆರೋಪಿಯ ಗುರುತು ಹಚ್ಚಿದೆ. ಓರ್ವ ಬೈಕ್‌ನಲ್ಲಿ ಸಂಚರಿಸುವ ದೃಶ್ಯಗಳು ಪೊಲೀಸರಿಗೆ ಲಭಿಸಿತ್ತು. ಮನೆಯಿಂದ ಲಭಿಸಿದ ಬೆರಳಚ್ಚುಗಳು ಕೂಡಾ ಆರೋಪಿಯ ಗುರುತು ಹಚ್ಚುವಲ್ಲಿ ನಿರ್ಣಾಯಕವಾಯಿತು. ಇಡೀ ನಾಡನ್ನೇ ಬೆಚ್ಚಿ ಬೀಳಿಸಿದ ಈ ಕಳವು ಪ್ರಕರಣದ ಆರೋಪಿಯನ್ನು ಐದು ದಿನಗಳೊಳಗೆ ಪತ್ತೆಹಚ್ಚಿ ಸೆರೆಹಿಡಿಯಲು ಸಾಧ್ಯವಾಗಿರುವುದು ಪೊಲೀಸರ ಸಾಧನೆಯ ಫಲವಾಗಿದೆ.
ಇದೀಗ ಸೆರೆಗೀಡಾದ ಇಬ್ರಾಹಿಂ ಕಲಂದರ್ 2024 ಫೆಬ್ರವರಿ 7ರಂದು ಕರ್ನಾಟಕ ಬ್ಯಾಂಕ್‌ನ ಅಡ್ಯನಡ್ಕ ಶಾಖೆಯಿಂದ 2 ಕಿಲೋ ಚಿನ್ನ ಹಾಗೂ 17 ಲಕ್ಷ ರೂಪಾಯಿ ಕಳವು ನಡೆಸಿದ ಮುಖ್ಯ ಆರೋಪಿಗಳಲ್ಲಿ ಓರ್ವನಾಗಿ ದ್ದಾನೆ . ಈತನನ್ನು ಹಾಗೂ ಸುಳ್ಯ ಕೊಲದ ರಫೀಕ್ ಯಾನೆ ಗೂಡಿನ ಬಳಿ ರಫೀಕ್, ಪೈವಳಿಕೆ ಬಾಯಾರಿನ ದಯಾನಂದ ಎಂಬಿವರನ್ನು ಅಂದು ವಿಟ್ಲ ಪೊಲೀಸರು ಅತೀ ಸಾಹಸಿಕವಾಗಿ ಸೆರೆಹಿಡಿದಿದ್ದರು. ಘಟನೆ ದಿನದಂದು ರಾತ್ರಿ ಸ್ವಿಫ್ಟ್ ಕಾರಿನಲ್ಲಿ ತಲುಪಿದ ಕಳ್ಳರು ಅಡ್ಯನಡ್ಕ ಬ್ಯಾಂಕ್ ಕಟ್ಟಡದ ಹಿಂಭಾಗದ ಕಿಟಿಕಿಯ ಕಬ್ಬಿಣದ ಸರಳು ಮುರಿದು ಒಳಗೆ ನುಗ್ಗಿ ಗ್ಯಾಸ್ ಕಟ್ಟರ್ ಬಳಸಿ ಲಾಕರ್ ತೆರೆದು ಚಿನ್ನಾಭರಣ ಹಾಗೂ ಹಣವನ್ನು ದೋಚಿದ್ದರು. ಅಂದು ಕೂಡಾ ಸಿಸಿ ಟಿವಿ ದೃಶ್ಯಗಳು ಆರೋಪಿಗಳ ಗುರುತುಹಚ್ಚಲು ಸಹಾಯಕವಾಗಿತ್ತು.
ಇದೇ ವೇಳೆ ಬಂಧಿತ ಆರೋಪಿ ಕಲಂದರ್ ಇಬ್ರಾಹಿಂನನ್ನು ಬದಿಯಡ್ಕ ಪೊಲೀಸರು ಕಸ್ಟಡಿಗೆ ತೆಗೆದು ತನಿಖೆ ನಡೆಸಲಿದ್ದಾರೆಂದು ತಿಳಿದುಬಂದಿದೆ. ಬಾಡೂರಿನಲ್ಲಿ ಇತ್ತೀಚೆಗೆ ನಡೆದ ಅಂಗಡಿ ಗಳ ಕಳವು ಸಂಬಂಧ ಆರೋಪಿಯನ್ನು ತನಿಖೆಗೊಳಪಡಿಸಲಾಗುವುದು.
ಕಳವಿಗೀಡಾದ ಚಿನ್ನ ಕರ್ನಾಟಕದಿಂದ ಪತ್ತೆ
ಕುಂಬಳೆ: ನಾಯ್ಕಾಪು ನಿವಾಸಿ ಚೈತ್ರರ ಮನೆಯಿಂದ ಕಳವಿಗೀಡಾದ ಚಿನ್ನಾಭರಣಗಳ ಪೈಕಿ ಸ್ಪಲ್ಪ ಪ್ರಮಾಣವನ್ನು ಪೊಲೀಸರು ಪತ್ತೆಹಚ್ಚಿರುವುದಾಗಿ ತಿಳಿದುಬಂದಿದೆ. ಸೆರೆಗೀಡಾದ ಆರೋಪಿ ಇಬ್ರಾಹಿಂ ಯಾನೆ ಕಲಂದರ್ ಇಬ್ರಾಹಿಂನ ಪತ್ತೆಗಾಗಿ ಪೊಲೀಸರು ನಡೆಸಿದ ಪರಿಶೀಲನೆ ವೇಳೆ ಈತ ಕರ್ನಾಟಕದ ಜ್ಯುವೆಲ್ಲರಿಯೊಂದಕ್ಕೆ ಹೋದ ಸಿಸಿ ಟಿವಿ ಕ್ಯಾಮರಾ ದೃಶ್ಯಗಳು ಪೊಲೀಸರಿಗೆ ಲಭಿಸಿತ್ತು. ಇದರ ಆಧಾರದಲ್ಲಿ ಪೊಲೀಸರು ಪ್ರಸ್ತುತ ಜ್ಯುವೆಲ್ಲರಿಗೆ ತೆರಳಿ ಆರೋಪಿ ಮಾರಾಟಗೈದುದೆಂದು ಅಂದಾಜಿಸಲಾದ ಚಿನ್ನವನ್ನು ಪತ್ತೆಹಚ್ಚಿ ವಶಪಡಿಸಿದ್ದಾರೆ. ಬಳಿಕ ಅದರ ಫೋಟೋವನ್ನು ಚೈತ್ರರಿಗೆ ಕಳುಹಿಸಿಕೊಟ್ಟಿದ್ದು ಅದು ಕಳವಿಗೀಡಾದ ಚಿನ್ನವೆಂದು ಚೈತ್ರ ಗುರುತುಹಚ್ಚಿದ್ದಾರೆನ್ನಲಾಗಿದೆ. ಇದೇ ವೇಳೆ ಬಂಧಿತ ಆರೋಪಿಯನ್ನು ಸಮಗ್ರ ತನಿಖೆ ನಡೆಸಿದರೆ ಕಳವು ನಡೆಸಿದ ಪೂರ್ಣಪ್ರಮಾಣದ ಚಿನ್ನ ಹಾಗೂ ಬೆಳ್ಳಿ ಆಭರಣಗಳು ಪತ್ತೆಯಾಗಬಹುದೆಂದು ಪೊಲೀಸರು ಅಂದಾಜಿಸಿದ್ದಾರೆ.







