ಶಬರಿಮಲೆ: ಶಬರಿಮಲೆ ಚಿನ್ನ ಕಳವು ಪ್ರಕರಣದ ತನಿಖೆ ಒಂದೆಡೆ ಭರದಿಂದ ಸಾಗುತ್ತಿರುವಂತೆಯೇ ಇದರ ಜತೆಗೆ ಹೊಸ ಹೊಸ ಅವ್ಯವಹಾರಗಳು ಒಂದರ ಹಿಂದೆ ಒಂದು ಎಂಬಂತೆ ಹೊರಬರತೊಡಗಿದೆ.
ಶಬರಿಮಲೆ ದೇಗುಲದ ಧ್ವಜಸ್ತಂಭ ನಿರ್ಮಾಣಕ್ಕಾಗಿ ಚಿನ್ನ ಸ್ವೀಕರಿಸಿದ ವಿಷಯದಲ್ಲಿ ಮಾಜಿ ಅಡ್ವಕೇಟ್ ಕಮಿಷನರ್ ಎ.ಎಸ್.ಪಿ ಕುರುಪ್ ಗಂಭೀರವಾದ ರೀತಿಯ ಕಾಯ್ದೆ ಉಲ್ಲಂಘನೆ ನಡೆಸಿದ್ದಾರೆಂದು ಈ ಬಗ್ಗೆ ದೇವಸ್ವಂ ವಿಜಿಲೆನ್ಸ್ ವಿಭಾಗ ತನಿಖೆ ನಡೆಸಿ ಹೈಕೋರ್ಟ್‌ಗೆ ಸಲ್ಲಿಸಿದ ವರದಿಯಲ್ಲಿ ತಿಳಿಸಲಾಗಿದೆ.
ಧ್ವಜಸ್ತಂಭ ನಿರ್ಮಾಣಕ್ಕಾಗಿ ಭಕ್ತರಿಂದ ಚಿನ್ನವನ್ನು ಕಾಣಿಕೆ ರೂಪದಲ್ಲಿ ಪಡೆಯುವ ಹೊಣೆಗಾರಿಕೆಯನ್ನು ಮುಜರಾಯಿ ಮಂಡಳಿಯು ಶ್ರೀ ಕ್ಷೇತ್ರದ ಎಕ್ಸಿಕ್ಯೂಟಿವ್ ಆಫೀಸರ್‌ಗೆ ವಹಿಸಿಕೊಟ್ಟಿತ್ತಾದರೂ, ಅದರ ಬದಲು ಮಾಜಿ ಅಡ್ವಕೇಟ್ ಕಮಿಷನರ್ ಭಕ್ತರಿಂದ ಆ ಚಿನ್ನ ಪಡೆದುಕೊಂಡಿ ದ್ದರೆಂದೂ, ಹೀಗೆ ಕಾಣಿಕೆ ರೂಪದಲ್ಲಿ ಚಿನ್ನ ನೀಡಿದವರ ಹೆಸರು ಯಾ ಇತರ ಮಾಹಿತಿಗಳನ್ನು ಸಂಬಂಧಪಟ್ಟ ದಾಖಲು ಪತ್ರಗಳಲ್ಲಿ ಸರಿಯಾಗಿ ನಮೂದಿಸಲಾ ಗಿಲ್ಲ ಎಂದು ದೇವಸ್ವಂ ವಿಜಿಲೆನ್ಸ್ ವಿಭಾಗದ ತನಿಖಾ ವರದಿಯಲ್ಲಿ ಹೇಳಲಾಗಿದೆ. ಇದರ ತನಿಖೆಯನ್ನು ವಿಜಿಲೆನ್ಸ್ ಇನ್ನಷ್ಟು ತ್ವರಿತಗೊಳಿಸಿದ್ದು, ಆ ಕುರಿತಾದ ಸಂಬಂಧಪಟ್ಟ ದಾಖಲು ಪತ್ರಗಳನ್ನು ಹಾಜರುಪಡಿಸುವಂತೆ ಮುಜರಾಯಿ ಮಂಡಳಿ ಕಾರ್ಯ ದರ್ಶಿಗೆ ವಿಜಿಲೆನ್ಸ್ ನಿರ್ದೇಶಕರು ಪತ್ರದ ಮೂಲಕ ನಿರ್ದೇಶವನ್ನೂ ನೀಡಿದ್ದಾರೆ.
ಹೈಕೋರ್ಟ್ ನೀಡಿದ ನಿರ್ದೇಶ ಪ್ರಕಾರ ವಿಜಿಲೆನ್ಸ್ ನಿರ್ದೇಶಕ ಮನೋಜ್ ಎಬ್ರಹಾಂ ಈ ಪತ್ರವನ್ನು ಮುಜರಾಯಿ ಮಂಡಳಿ ಕಾರ್ಯ ದರ್ಶಿಗೆ ಕಳುಹಿಸಿಕೊಟ್ಟಿದ್ದಾರೆ. ಧ್ವಜಸ್ತಂಭ ನಿರ್ಮಾಣಕ್ಕಾಗಿ 9573.01 ಗ್ರಾಂ ಚಿನ್ನ ಲಭಿಸಿತ್ತು. ಇದರಲ್ಲಿ 9340.200 ಗ್ರಾಂ ಚಿನ್ನವನ್ನು ಧ್ವಜ ಸ್ತಂಭಕ್ಕೆ ಬಳಸಲಾಗಿದೆ. ಬಾಕಿ ಚಿನ್ನವನ್ನು ಇತರ ಅಗತ್ಯಗಳಿಗಾಗಿ ಉಪಯೋಗಿಸ ಲಾಗಿದೆ ಎಂದು ಹೇಳಲಾಗುತ್ತಿದ್ದರೂ, ಆ ವಿಷಯದಲ್ಲಿ ಸಮಗ್ರ ತನಿಖೆಯ ಅಗತ್ಯವಿದೆ ಎಂದು ಹೈಕೋರ್ಟ್‌ಗೆ ಸಲ್ಲಿಸಿದ ವರದಿಯಲ್ಲಿ ವಿಜಿಲೆನ್ಸ್ ತಿಳಿಸಿದೆ.
ನ್ಯಾಯಾಲಯಕ್ಕೆ ಈ ವರದಿ ಸಲ್ಲಿಸುವ ಮೊದಲು ಈ ವಿಷಯದಲ್ಲಿ ಎಎಸ್‌ಪಿ ಕುರುಪ್‌ರ ಹೇಳಿಕೆಯನ್ನೂ ದೇವಸ್ವಂ ವಿಜಿಲೆನ್ಸ್ ಮತ್ತು ಎಸ್‌ಐಟಿ ದಾಖಲಿಸಿಕೊಂಡಿತ್ತು. ಅದರ ಆಧಾರದಲ್ಲಿ ವಿಜಿಲೆನ್ಸ್ ವರದಿ ತಯಾರಿಸಿ ಅದನ್ನು ಹೈಕೋರ್ಟ್‌ಗೆ ಸಲ್ಲಿಸಿದೆ. ಈ ವರದಿಯನ್ನು ಪರಿಶೀಲಿಸಿದ ಹೈಕೋರ್ಟ್ ಆ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಕೊನೆಗೆ ನಿರ್ದೇಶ ನೀಡಿದೆ.







