ರಾಜ್ಯದಲ್ಲಿ ಶಿಕ್ಷಣ ಸಂಸ್ಥೆಗಳಿಗೆ ಇನ್ನು ಧರ್ಮ ಆಧಾರಿತ ಹೆಸರಿಡುವಂತಿಲ್ಲ

ತಿರುವನಂತಪುರ: ಕೇರಳದಲ್ಲಿ ಶಿಕ್ಷಣ ಸಂಸ್ಥೆಗಳಿಗೆ ಇನ್ನು ಧರ್ಮದ ಆಧಾರದಲ್ಲಿ ಹೆಸರು ಇಡುವಂತಿಲ್ಲವೆಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

 ಇದರಂತೆ ರಾಜ್ಯದಲ್ಲಿ ಇನ್ನು ಮುಂದೆ ಹೊಸದಾಗಿ ಸ್ಥಾಪಿಸಲಾಗುವ ಯಾವುದೇ ಸರಕಾರಿ ಹಾಗೂ ಸರಕಾರಿ ಸಾಮ್ಯದ  ವಿಶ್ವವಿದ್ಯಾಲಯಗಳು, ಸರಕಾರಿ ಶಾಲೆಗಳು, ಕಾಲೇಜುಗಳು ಮತ್ತು ಅನುದಾನಿತ ಶಿಕ್ಷಣ ಸಂಸ್ಥೆಗಳಿಗೆ ಇನ್ನು ಧರ್ಮ ಆಧಾರಿತ ಹೆಸರು ಇಡಬಾರದೆಂದು ಸರಕಾರ ನಿರ್ದೇಶ ನೀಡಿದೆ. ಆದರೆ ಸದ್ಯ ಅಸ್ತಿತ್ವದಲ್ಲಿರುವ ಶಿಕ್ಷಣ ಸಂಸ್ಥೆಗಳಿಗೆ ಈ ಹೊಸ ನಿರ್ದೇಶ ಯಾವುದೇ ರೀತಿಯ ಪರಿಣಾಮ ಬೀರದೆಂದೂ, ಹೊಸದಾಗಿ ಆರಂಭಿಸಲಾಗುವ ಶಿಕ್ಷಣ ಸಂಸ್ಥೆಗಳಿಗೆ ಮಾತ್ರವೇ ಇದು ಅನ್ವಯಗೊಳ್ಳಲಿದೆ ಯೆಂದು ಸರಕಾರ  ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದೆ.

ನ್ಯಾಯಮೂರ್ತಿ ಜೆ.ಬಿ. ಕೋಶಿ ಆಯೋಗದ ವರದಿಯನ್ನು ತಾತ್ವಿಕವಾಗಿ ಅಂಗೀಕರಿಸಿ ರಾಜ್ಯ ಸರಕಾರ ಈ ತೀರ್ಮಾನ ಕೈಗೊಂಡಿದೆ. ಸರಕಾರ ಮತ್ತು ಅನುದಾನಿತ ಸಂಸ್ಥೆಗಳು ಜಾತ್ಯಾತೀತವಾಗಿ ಉಳಿಯಲು, ಸಮಾನತೆ ಮತ್ತು ಎಲ್ಲರು ಒಳಗೊಳ್ಳುವ ಸಾಂವಿಧಾನಿಕ ಮೌಲ್ಯಗಳನ್ನು  ಪ್ರತಿಬಿಂಬಿಸುವಂತೆ ಮಾಡುವ ಗುರಿಯನ್ನು ಈ ನಿರ್ದೇಶ ಮೂಲಕ ಸರಕಾರ ಹಾಕಿಕೊಂಡಿದೆ.

RELATED NEWS

You cannot copy contents of this page