ಈಜುಕೊಳದ ಕೆಲಸದ ಮಧ್ಯೆ ಶಾಕ್ ತಗಲಿ ಪ್ಲಂಬರ್ ಯುವಕ ದಾರುಣ ಮೃತ್ಯು;  ಮಧೂರು ಪಟ್ಲದಲ್ಲಿ ಸಂಭವಿಸಿದ ದುರಂತ ಗಂಟೆಗಳ ಬಳಿಕ ಗಮನಕ್ಕೆ

ಕಾಸರಗೋಡು: ಸ್ವಿಮ್ಮಿಂಗ್ ಪೂಲ್‌ನ ಕೆಲಸದ ಮಧ್ಯೆ ಪ್ಲಂಬಿಂಗ್ ಕೆಲಸ ಮಾಡುತ್ತಿದ್ದ ಯುವಕ ಶಾಕ್ ತಗಲಿ ದಾರುಣವಾಗಿ ಮೃತಪಟ್ಟ ಘಟನೆ ಜರಗಿದೆ. ಬೆಳ್ಳೂರು ಮುಕುಡಂಗೋಳಿ ನಿವಾಸಿ ಚಿಕ್ಕಪ್ಪ ರೈ- ರತ್ನಾವತಿ ದಂಪತಿ ಪುತ್ರ ಪ್ರಭಾಕರ ರೈ (39) ಮೃತಪಟ್ಟ ಯುವಕ. ಮಧೂರು, ಪಟ್ಲ ಸರಕಾರಿ ಶಾಲೆ ಸಮೀಪದ ಅಬ್ದುಲ್ಲ ಎಂಬವರ ಮನೆ ಅಂಗಳದ ಈಜು ಕೊಳದಲ್ಲಿ ದುರಂತ ಸಂಭವಿಸಿದೆ.

ನಿನ್ನೆ ಸಂಜೆ 4 ಗಂಟೆಗೆ ಸಂಭವಿಸಿದ ದುರಂತದ ಬಗ್ಗೆ ಗಮನಕ್ಕೆ ಬಂದದ್ದು ರಾತ್ರಿಯಲ್ಲಾಗಿದೆ. ಅಗ್ನಿಶಾಮಕ ದಳ ತಲುಪಿ ಪ್ರಭಾಕರ್ ರೈಯ ಮೃತದೇಹ ವನ್ನು ನೀರಿನಿಂದ ಮೇಲೆತ್ತಿ ಜನರಲ್ ಆಸ್ಪತ್ರೆಯ ಶವಾಗಾರಕ್ಕೆ ತಲುಪಿಸಿದೆ.

ಮುಹಾದ್ ಎಂಬ ವ್ಯಕ್ತಿಗೆ ಸ್ವಿಮ್ಮಿಂಗ್‌ಪೂಲ್‌ನ ನಿರ್ಮಾಣ ಹೊಣೆ ನೀಡಲಾಗಿತ್ತು. ಇವರ ಸಹಾಯಕನಾಗಿ ಪ್ರಭಾಕರ್ ರೈ ತಲುಪಿದ್ದಾರೆ. ರಂಜಾನ್ ವ್ರತಾನುಷ್ಠಾನದಲ್ಲಿದ್ದ ಕಾರಣ ಮುಹಾದ್ ಸಂಜೆ 4 ಗಂಟೆ ವೇಳೆಗೆ ಕೆಲಸ ಮುಗಿಸಿದ್ದರು. ಪ್ರಭಾಕರ್ ರೈಯಲ್ಲಿ ಕೆಲಸ ನಿಲ್ಲಿಸಿ ಹೋಗಲು ಹೇಳಿದ ಬಳಿಕ ತಾನು ತೆರಳಿರುವುದಾಗಿ ಮುಹಾದ್ ತಿಳಿಸಿದ್ದಾರೆ. ಅದರ ಬಳಿಕ ಅಪಾಯ ಸಂಭವಿಸಿರಬೇಕೆಂದು ಶಂಕಿಸಲಾಗುತ್ತಿದೆ. ಕೆಲಸ ಮುಗಿಸಿ ಪ್ರಭಾಕರ್ ರೈ ಮನೆಗೆ ತಲುಪದ ಹಿನ್ನೆಲೆಯಲ್ಲಿ ನಡೆಸಿದ ತನಿಖೆಯಲ್ಲಿ ಮೃತಪಟ್ಟ ಮಾಹಿತಿ ತಿಳಿದು ಬಂದಿದೆ. ಸಿಸಿ ಟಿವಿ ದೃಶ್ಯಗಳನ್ನು ಪರಿಶೀಲಿಸಿದಾಗ 4 ಗಂಟೆ ಕಳೆದ ಬಳಿಕ ದುರಂತ ಸಂಭವಿಸಿರುವುದಾಗಿ ಸ್ಪಷ್ಟಗೊಂ ಡಿದೆ ಎಂದು ಹೇಳಲಾಗುತ್ತಿದೆ. ಮೃತ ಪ್ರಭಾಕರ್ ರೈ ತಂದೆ, ತಾಯಿ, ಪತ್ನಿ ಅಕ್ಷತ, ಏಕಪುತ್ರ ತುಶಾನ್, ಸಹೋದರರಾದ ಸುಧಾಕರ ರೈ, ಕರುಣಾಕರ ರೈ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page