ತಿರುವನಂತಪುರ: ಕೇರಳ ಸೇರಿದಂತೆ ತಮಿಳುನಾಡು, ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ಪುದುಚೇರಿ ಎಂಬೀ ಪಂಚರಾಜ್ಯಗಳ ವಿಧಾನಸಭೆ ಚುನಾವಣಾ ದಿನಾಂಕವನ್ನು ಕೇಂದ್ರ ಚುನಾವಣಾ ಆಯೋಗ ನಿನ್ನೆ ಘೋಷಿಸಿರುವ ಬೆನ್ನಲ್ಲೇ, ಚುನಾವಣೆಯ ವಿದ್ಯುಕ್ತ ಅಧಿಸೂಚನೆಯನ್ನು ಆಯೋಗ ಇಂದು ಪ್ರಕಟಿಸಿದೆ. ಮಾತ್ರವಲ್ಲ ಚುನಾವಣಾ ನೀತಿ ಸಂಹಿತೆಯೂ ಇದರ ಜೊತೆಗೆ ಜ್ಯಾರಿಗೊಂಡಿದೆ.
ಕೇರಳದಲ್ಲಿ ಎಡರಂಗ, ಐಕ್ಯರಂಗ ಮತ್ತು ಬಿಜೆಪಿ ನೇತೃತ್ವದ ಎನ್ಡಿಎ ನಡುವಿನ ಜಿದ್ದಾಜಿದ್ದಿನ ಹೋರಾಟಕ್ಕೂ ವೇದಿಕೆ ಸಜ್ಜಾಗಿದೆ. ಕೇರಳ ವಿಭಾನ ಸಭೆಯ ಒಟ್ಟು 140 ಕ್ಷೇತ್ರಗಳಿಗೆ ಎಪ್ರಿಲ್ ೯ರಂದು ಏಕ ಹಂತದಲ್ಲೇ ಚುನಾವಣೆ ನಡೆಯಲಿದೆ. ಇದರಲ್ಲಿ 14 ಕ್ಷೇತ್ರಗಳನ್ನು ಪರಿಶಿಷ್ಟ ಜಾತಿ ಮತ್ತು ಎರಡನ್ನು ಪರಿಶಿಷ್ಟ ಪಂಗಡದವರಿಗಾಗಿ ಮೀಸಲಿರಿಸಲಾಗಿದೆ. ಅಂತಿಮ ಮತದಾರ ಯಾದಿಯಲ್ಲಿ ಕೇರಳದಲ್ಲಿ 1.38 ಕೋಟಿ ಮಹಿಳೆಯರು, 1.31 ಕೋಟಿ ಪುರುಷರು ಹಾಗೂ 277 ಮಂಗಳಮುಖಿಯರು ಸೇರಿದಂತೆ ಒಟ್ಟು 2.77 ಕೋಟಿ ಮತದಾರರಿದ್ದಾರೆ. ಇದರಲ್ಲಿ 100ಕ್ಕಿಂತಲೂ ಹೆಚ್ಚಿನ ಪ್ರಾಯದ 1571, 85 ವರ್ಷ ದಾಟಿದ 2.04 ಲಕ್ಷ ಹಾಗೂ 2.43 ಲಕ್ಷ ವಿಕಲ ಚೇತನರೂ ಒಳಗೊಂಡಿದ್ದಾರೆ. ಮಾತ್ರವಲ್ಲ ಚೊಚ್ಚಲ ಮತದಾನ ಹಕ್ಕು ಪಡೆದುಕೊಂಡಿರುವ (18ರಿಂದ 19ರ ಮಧ್ಯೆ ಪ್ರಾಯದ) 4.24 ಲಕ್ಷ ಮಂದಿಯೂ ಇದರಲ್ಲಿ ಒಳಗೊಂಡಿದ್ದಾರೆ. ಚುನಾವಣೆಗಾಗಿ ಕೇರಳದಲ್ಲಿ ಒಟ್ಟು 30,471 ಮತಗಟ್ಟೆಗಳನ್ನು ಏರ್ಪಡಿಸಲಾಗಿದೆ. ಇದರಲ್ಲಿ ನಗರ ಪ್ರದೇಶಗಳಲ್ಲಿ 6130 ಮತ್ತು ಗ್ರಾಮೀಣ ಪ್ರದೇಶಗಳಲ್ಲಿ 24,341 ಮತಗಟ್ಟೆಗಳು ಒಳಗೊಂಡಿವೆ. ಕೇರಳ ವಿಧಾನಸಭೆಗೆ ನಡೆಯಲಿರುವ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಕೆಗೆ ಅಂತಿಮ ದಿನ ಮಾರ್ಚ್ 23ರಂದು ಆಗಿದೆ. ಮಾರ್ಚ್ 24ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ನಾಮಪತ್ರ ಹಿಂತೆಗೆಯಲು ಮಾರ್ಚ್ 26 ಕೊನೆಯ ದಿನಾಂಕವಾಗಿದೆ. ನಂತರ ಎಪ್ರಿಲ್ 9ರಂದು ಮನತದಾನ ನಡೆದು, ಮೇ 4ರಂದು ಮತ ಎಣಿಕೆ ನಡೆಯಲಿದೆ.
ಪಶ್ಚಿಮ ಬಂಗಾಳದಲ್ಲಿ ಎರಡು ಹಂತಗಳಲ್ಲಾಗಿ ಮತದಾನ ನಡೆಯಲಿದೆ. ಕೇರಳದಲ್ಲಿ ಮತದಾನಕ್ಕೆ ಇನ್ನು ಕೇವಲ 25 ದಿನಗಳು ಹಾಗೂ ಬಹಿರಂಗ ಪ್ರಚಾರಕ್ಕೆ ಕೇವಲ 23 ದಿನಗಳು ಮಾತ್ರವೇ ಬಾಕಿ ಉಳಿದುಕೊಂಡಿದೆ.







