ಕಾಸರಗೋಡು: ಕಾರಿನಲ್ಲಿ ಸಾಗಿಸುತ್ತಿದ್ದ ಮಾದಕದ್ರವ್ಯವಾದ 1.26 ಗ್ರಾಂ ಎಂಡಿಎಂಎ ಸಹಿತ ಮೂವರನ್ನು ಚಂದೇರ ಪೊಲೀಸರು ಬಂಧಿಸಿದ್ದಾರೆ. ಈ ವೇಳೆ ಓರ್ವ ಪೊಲೀಸರ ಕಣ್ತಪ್ಪಿಸಿ ಪರಾರಿಯಾಗಿ ದ್ದಾನೆ. ನೋರ್ತ್ ತೃಕರಿಪುರ ಮಿಲಿಯೇಟ್ನ ಎಂ.ಟಿ.ಪಿ. ಮರ್ಶಾದ್ (24), ಉದಿನೂರು ನಡಕ್ಕಾವಿನ ಮುಹಮ್ಮದ್ ಸಫ್ವಾನ್ (28) ಮತ್ತು ನೋರ್ತ್ ತೃಕರಿಪುರದ ಅಯಿಟ್ಟಿ ನಿವಾಸಿ ಮುಹಮ್ಮದ್ ಶಿಯಾಸ್ (31) ಬಂಧಿತರಾದ ಆರೋಪಿಗಳು.
ವಲಿಯಪರಂಬದಲ್ಲಿ ರಾತ್ರಿ ಪೊಲೀಸರು ವಾಹನ ತಪಾಸಣೆಯಲ್ಲಿ ತೊಡಗಿದ್ದಾಗ ಆ ದಾರಿಯಾಗಿ ಆರೋಪಿಗಳು ಬಂದ ಕಾರನ್ನು ತಪಾಸಣೆಗೊಳಪಡಿಸಿದಾಗ ಅದರಲ್ಲಿ ಎಂಡಿಎಂಎ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದಕ್ಕೆ ಸಂಬಂಧಿಸಿ ಮೂವರನ್ನು ತಕ್ಷಣ ವಶಕ್ಕೆ ತೆಗೆದುಕೊಳ್ಳಲಾಗಿದೆ. ಆ ಕಾರಿನಲ್ಲಿದ್ದ ಇನ್ನೋರ್ವ ಪರಾರಿಯಾಗಿರುವುದಾಗಿಯೂ ಆತನ ಪತ್ತೆಗಾಗಿರುವ ಶೋಧ ಇನ್ನೂ ಮುಂಮದುವರಿಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳು ಸಂಚರಿಸುತ್ತಿದ್ದ ಕಾರನ್ನೂ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಚಂದೇರ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಜಿಯೋ ಸದಾನಂದನ್, ಪ್ರೊಬೆಷನರಿ ಎಸ್ಐ ಸತೀಶ್ ಎಂಬವರ ನೇತೃತ್ವದ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ. ಬಂಧಿತರನ್ನು ನಂತರ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ.







