ಉಪ್ಪಳ ನಿವಾಸಿಯನ್ನು ಅಪಹರಿಸಿ ಕೊಲೆಗೈದ ಪ್ರಕರಣ: 6 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ  ಕಣ್ಣೂರಿನಿಂದ ಬಂಧನ

ಕುಂಬಳೆ: ಉಪ್ಪಳ ಬಳಿಯ ಸೋಂಕಾಲ್ ನಿವಾಸಿಯನ್ನು ಮನೆಯಿಂದ ಅಪಹರಿಸಿಕೊಂ ಡೊಯ್ದು ಗಂಭೀರ ಹಲ್ಲೆ ನಡೆಸಿ ಕೊಲೆಗೈದ ಪ್ರಕರಣದಲ್ಲಿ ಕಳೆದ ಆರು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಲಾಗಿದೆ. ಮಂಗಲ್ಪಾಡಿ ಪೆರಿಂಗಡಿ ಪಳ್ಳಿ ಹೌಸ್‌ನ ಅಬ್ದುಲ್ ರುಮೀದ್ (29)ಎಂಬಾತ ಬಂಧಿತ ಆರೋಪಿಯಾಗಿದ್ದಾನೆ. ಗಲ್ಫ್‌ಗೆ ಪರಾರಿಯಾಗಿದ್ದ ಈತ ನಿನ್ನೆ ಕಣ್ಣೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದು, ಈ ವೇಳೆ ವಿಮಾನ ನಿಲ್ದಾಣ ಅಧಿಕಾರಿಗಳು ತಡೆದು ನಿಲ್ಲಿಸಿ ಕುಂಬಳೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಇದರಂತೆ  ಕುಂಬಳೆ ಪೊಲೀಸ್ ಇನ್‌ಸ್ಪೆಕ್ಟರ್ ಬೈಜು ಕೆ ಜೋಸ್ ನೇತೃತ್ವದಲ್ಲಿ  ಪೊಲೀಸರು ಕಣ್ಣೂರಿಗೆ ತೆರಳಿ ಆರೋಪಿಯನ್ನು ಕಸ್ಟಡಿಗೆ ತೆಗೆದಿದಾರ. ಬಳಿಕ ಆತನ ಬಂಧನ ದಾಖಲಿಸಿ ನ್ಯಾಯಾಲಯದಲ್ಲಿ  ಹಾಜರುಪಡಿಸಿದ್ದು, ಈ ವೇಳೆ ಆರೋಪಿಗೆ  ನ್ಯಾಯಾಲಯ ರಿಮಾಂಡ್ ವಿಧಿಸಿದೆ.

ಉಪ್ಪಳ ಸೋಂಕಾಲ್ ನಿವಾಸಿ ಅಲ್ತಾಫ್ (55) ಎಂಬವರನ್ನು ಕೊಲೆಗೈದ ಪ್ರಕರಣದಲ್ಲಿ ಅಬ್ದುಲ್ ರುಮೀದ್ ಆರೋಪಿಯಾಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.  2019 ಜೂನ್ 23ರಂದು ರಾತ್ರಿ ಅಲ್ತಾಫ್‌ರನ್ನು ಅವರ ಮನೆಯಿಂದ   ಅಬ್ದುಲ್ ರುಮೀದ್ ಒಳಗೊಂಡ ತಂಡ ಕಾರಿನಲ್ಲಿ ಅಪಹರಣ ನಡೆಸಿತ್ತು. ಬಳಿಕ ಅಲ್ತಾಫ್‌ರ ಮೇಲೆ ಹಲ್ಲೆಗೈದು ಗಂಭೀರ ಗಾಯಗೊಳಿಸಿದ್ದಲ್ಲದೆ ಅವರ ಕೈಯ ನರವನ್ನು  ಕತ್ತರಿಸಿ ಮಂಗಳೂರಿನ ಆಸ್ಪತ್ರೆಯೊಂದರ ವರಾಂಡದಲ್ಲಿ ಉಪೇಕ್ಷಿಸಿ ತಂಡ ಪರಾರಿಯಾಗಿತ್ತು. ಗಂಭೀರ ಸ್ಥಿತಿಯಲ್ಲಿದ್ದ ಅಲ್ತಾಫ್‌ರನ್ನು ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ  ನೀಡಿದ್ದರೂ ಪ್ರಯೋಜನವಾಗದೆ ಅವರು 2019 ಜೂನ್ 25ರಂದು ಮೃತಪಟ್ಟಿದ್ದರು. ಇದರಂತೆ ಅಪ್ತಾಫ್‌ರ ಅಳಿಯ ಶಬೀರ್, ಅಬ್ದುಲ್ ರುಮೀದ್ ಸೇರಿದಂತೆ ಐದು ಮಂದಿ   ವಿರುದ್ಧ ಕುಂಬಳೆ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದರು.   ಈ ಪ್ರಕರಣದಲ್ಲಿ ಅಂದು ಸೆರೆಗೀಡಾದ ಅಬ್ದುಲ್ ರುಮೀದ್  ಬಳಿಕ ಜಾಮೀನಿನಲ್ಲಿ    ಬಿಡುಗಡೆಗೊಂಡ ಬಳಿಕ ಹಾಜರಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಈತನನ್ನು ತಲೆಮರೆಸಿಕೊಂಡ ಆರೋಪಿ ಯೆಂದು  ನ್ಯಾಯಾಲಯ ಘೋಷಿಸಿತ್ತು. ಅಲ್ಲದೆ ಅಬ್ದುಲ್ ರುಮೀದ್‌ನ ಪತ್ತೆಗಾಗಿ ಪೊಲೀಸರು  ಲುಕೌಟ್ ನೋಟೀಸು ಹೊರಡಿಸಿದ್ದರು. ಕೊಲೆ ಪ್ರಕರಣ ಮಾತ್ರವಲ್ಲದೆ 2020ರಲ್ಲಿ ಆಯುಧ ಕೈವಶವಿರಿಸಿಕೊಂಡ ಆರೋಪ ಸಹಿತ 5 ಕೇಸುಗಳು ಈತನ ವಿರುದ್ಧ  ದಾಖಲಿಸಲಾಗಿತ್ತೆಂದು ಪೊಲೀಸರು ತಿಳಿಸಿದ್ದಾರೆ.

You cannot copy contents of this page