ಕಾಸರಗೋಡು: ಮೈಲಾಟಿಯಲ್ಲಿ ಫಿನೋಯಿಲ್ ಮಾರಾಟ ಕೇಂದ್ರದ ಮರೆಯಲ್ಲಿ ಅನಧಿಕೃತವಾಗಿ ನಡೆಸಲಾ ಗುತ್ತಿದ್ದ ನಿಷೇದಿತ ಪಾನ್ ಮಸಾಲೆ ತಯಾರಿ ಘಟಕಕ್ಕೆ ಅಗತ್ಯದ ಆರ್ಥಿಕ ಬಂಡವಾಳ ಹೂಡಿದ ಆರೋಪಿಯನ್ನು ಮೇಲ್ಪರಂಬ ಎಸ್‌ಐ ಸುರೇಶ್ ಕುಮಾರ್ ನೇತೃತ್ವದ ಪೊಲೀಸರು ಬಂಧಿಸಿದ್ದಾರೆ. ಕಾಸರಗೋಡು ನುಳ್ಳಿಪ್ಪಾಡಿ ಪೆಟ್ರೋಲ್ ಬಂಕ್ ಬಳಿಯ ನಿವಾಸಿ ಸುಹೈಲ್ (34) ಬಂಧಿತ ವ್ಯಕ್ತಿಯಾಗಿದ್ದಾನೆ. ಈತನನ್ನು ನ್ಯಾಯಾಂಗಬಂಧನದಲ್ಲಿರಿಸಲಾಗಿದೆ. ಈತ ಅನಧಿಕೃತ ಪಾನ್ ಮಸಾಲೆ ತಯಾರಿ ಘಟಕಕ್ಕೆ ಹಣ ಹೂಡುತ್ತಿದ್ದ ಮುಖ್ಯಸ್ಥನಾಗಿದ್ದಾನೆ. ಇದರಲ್ಲಿ ಇನ್ನೋರ್ವನ ಪಾಲುದಾರಿಕೆಯೂ ಇದೆ. ಆತ ತಲೆಮರಿಸಿಕೊಂಡಿರು ವುದಾಗಿ ತನಿಖೆಯಲ್ಲಿ ತಿಳಿದುಬಂದಿದೆ. ಆತನ ಪತ್ತೆಗಾಗಿ ಶೋಧ ಕಾರ್ಯಾ ಚರಣೆ ಮುಂದುವರಿಸಲಾ ಗುವುದೆಂದು ಪೊಲೀಸರು ತಿಳಿಸಿದ್ದಾರೆ. ಮೈಲಾಟಿ ಯಲ್ಲಿ ಅನಧಿಕೃತವಾಗಿ ಪಾನ್ ಮಸಾಲೆ ತಯಾರಿ ಘಟಕ ಕಾರ್ಯವೆಸಗುತ್ತಿದ್ದ ಬಗ್ಗೆ ಲಭಿಸಿದ ಗುಪ್ತ ಮಾಹಿತಿಯಂತೆ ಜೂನ್ ೨೩ರಂದು ಪೊಲೀಸರು ಅಲ್ಲಿಗೆ ದಾಳಿ ನಡೆಸಿದ್ದರು. ಪಾನ್ ಮಸಾಲೆ ತಯಾರಿಗಾಗಿ ತಂದಿರಿಸಲಾಗಿದ್ದ ಕಚ್ಛಾವಸ್ತುಗಳು, ಅವುಗಳನ್ನು ತಯಾರಿಸುವ ಯಂತ್ರೋಪಕರಣಗಳು ಹಾಗೂ ಗೋಣಿ ಚೀಲಗಳಲ್ಲಿ ತುಂಬಿಸಿಡಲಾಗಿದ್ದ ಭಾರೀ ಪ್ರಮಾಣದ ತಂಬಾಕು ಉತ್ಪನ್ನಗಳನ್ನು ಪೊಲೀಸರು ಅಂದು ಪತ್ತೆಹಚ್ಚಿ ವಶಪಡಿಸಿ ಕೊಂಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ಕೂಡ್ಲು ಮೀಪುಗುರಿಯ ಸಿ.ಎಂ. ಜಾಫರ್ (32) ಮತ್ತು ಬದಿಯಡ್ಕದ ಮುಹಮ್ಮದ್ ಹಾರಿಸ್ (29) ಎಂಬಿವರನ್ನು ಪೊಲೀಸರು ದಾಳಿ ನಡೆಸಿದ ದಿನದಂದೇ ಬಂಧಿಸಿದ್ದರು.






