ಟಿಪ್ಪರ್ ಲಾರಿ ಹಿಂಬದಿಗೆ ಬೈಕ್ ಢಿಕ್ಕಿ: ಯುವಕನ ಸಾವಿನಿಂದ ಶೋಕಸಾಗರ

ಉಪ್ಪಳ: ವಾಹನ ಅಪಘಾತದಲ್ಲಿ ಹೋಟೆಲ್ ನೌಕರನಾದ ಯುವಕ ಮೃತಪಟ್ಟ ಘಟನೆಯಿಂದ ನಾಡಿನಲ್ಲಿ ಶೋಕಸಾಗರ ಸೃಷ್ಟಿಯಾಗಿದೆ.

ಉಪ್ಪಳ ನಯಾಬಜಾರ್ ಬಳಿಯ ಯು.ಕೆ. ಫ್ಲಾಟ್‌ನಲ್ಲಿ ವಾಸಿಸುವ ಐಮಾನುಲ್ಲ (19) ಅಪಘಾತದಲ್ಲಿ ಮೃತಪಟ್ಟ ದುರ್ದೈವಿಯಾಗಿದ್ದಾನೆ. ಐಮಾನುಲ್ಲ  ಹೊಸಂಗಡಿಯಲ್ಲಿ ಹೋಟೆಲ್ ನೌಕರನಾಗಿದ್ದರು. ನಿನ್ನೆ ಮಧ್ಯಾಹ್ನ  1 ಗಂಟೆ ವೇಳೆ ರಾಷ್ಟ್ರೀಯ ಹೆದ್ದಾರಿಯಲ್ಲಿ  ವಾಮಂಜೂರು ಸೇತುವೆ ಬಳಿ ಸರ್ವೀಸ್ ರಸ್ತೆಯ ದ್ವಾರದಲ್ಲಿ ಅಪಘಾತವುಂಟಾಗಿದೆ. ಐಮಾನುಲ್ಲ ಚಲಾಯಿಸುತ್ತಿದ್ದ ಬೈಕ್ ಟಿಪ್ಪರ್ ಲಾರಿಯ ಹಿಂಬದಿಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿತ್ತು. ಟಿಪ್ಪರ್ ಲಾರಿ ಹೊಸಂಗಡಿಯಿಂದ ಉಪ್ಪಳ ಭಾಗಕ್ಕೆ ತೆರಳುತ್ತಿತ್ತು. ಅದೇ ರಸ್ತೆಯಲ್ಲಿ ಬಂದ ಬೈಕ್ ಲಾರಿಯ ಹಿಂಬದಿಗೆ ಢಿಕ್ಕಿ ಹೊಡೆದಿದೆ. ಇದರಿಂದ  ಗಂಭೀರ ಗಾಯಗೊಂಡ ಐಮಾನುಲ್ಲನನ್ನು ಕೂಡಲೇ ಮಂಗಳೂರಿನ ಆಸತ್ರೆಗೆ  ಸಾಗಿಸುತ್ತಿದ್ದಂತೆ ಸಾವು ಸಂಭವಿಸಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ದೇರಳಕಟ್ಟೆ ಆಸ್ಪತ್ರೆಗೆ ತಲುಪಿಸಲಾಗಿದೆ. ಅಮಾನುಲ್ಲ-ಸಬೀನ ಬಾನು ದಂಪತಿ ಪುತ್ರನಾದ ಮೃತರು ಸಹೋದರ ಅಲ್ಮಾನ್, ಸಹೋದರಿ ಶಬ್ನಂ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ ಅಪಘಾತಕ್ಕೆ ಸಂಬಂಧಿಸಿ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

You cannot copy contents of this page