ಕಾಸರಗೋಡು: ಉನ್ನತ ಶಿಕ್ಷಣ ಸಂಸ್ಥೆಗಳು, ಉತ್ತಮ ಉದ್ಯೋಗಾ ವಕಾಶಗಳ ಕೊರತೆಯಿಂದ ಸ್ಥಳೀಯ ರಾದ ಯುವಕರನ್ನು ಕೇರಳದಿಂದ ಹೊರಗೆ ಕಳುಹಿಸಿ ವೃದ್ಧರಾಜ್ಯವನ್ನಾಗಿ ಮಾಡಿರುವುದು ಎಡ-ಬಲ ಒಕ್ಕೂಟಗಳ ಆಡಳಿತ ಸಾಧನೆಯೆಂದು ರಾಜ್ಯ ಸಭಾ ಸದಸ್ಯ ಸಿ. ಸದಾನಂದನ್ ಮಾಸ್ತರ್ ನುಡಿದರು. ಮಹಿಳಾ ಮೋರ್ಛಾದ ನೇತೃತ್ವದಲ್ಲಿ ಬಿಜೆಪಿ ಜಿಲ್ಲಾ ಸಮಿತಿ ಕಚೇರಿಯಲ್ಲಿ ನಡೆಸಿದ ಮಹಿಳಾ ನಾಯಕತ್ವ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ಸ್ಥಳೀಯರಾದ ಕಾರ್ಮಿಕರ ಕೊರತೆ ಕಾರಣದಿಂದಾಗಿ ಕೃಷಿ, ಕಿರು ಕೈಗಾರಿಗೆಗಳು ಸಹಿತ ಸಂದಿಗ್ಧತೆಯಲ್ಲಿದೆ. ಕೇಂದ್ರ ಸರಕಾರದ ಮೂಲಭೂತ ಸೌಲಭ್ಯ ಅಭಿವೃದ್ಧಿ ಯೋಜನೆಗಳು, ಜನಕ್ಷೇಮ ಯೋಜನೆಗಳು ಹೊರತುಪಡಿಸಿ ಬೇರೇನೂ ಕೇರಳದಲ್ಲಿ ಕಾಣಲು ಸಾಧ್ಯವಾಗುತ್ತಿಲ್ಲ. ಮಹಿಳಾ ಸೌಹಾರ್ದ ನೀತಿಗಳು, ಯೋಜನೆಗ ಳನ್ನು ಆವಿಷ್ಕರಿಸಿ ಜ್ಯಾರಿಗೊಳಿಸಿ ರುವುದು ನರೇಂದ್ರಮೋದಿ ಸರಕಾರ ವಾಗಿದೆ. ಪಿಎಂಶ್ರೀ ಯೋಜನೆ ಜ್ಯಾರಿಗೊಳಿಸಿದ್ದರೆ ಜಿಲ್ಲೆಯಲ್ಲಿ ಆರು ಶಿಕ್ಷಣ ಸಂಸ್ಥೆಗಳಲ್ಲಿ ಉತ್ತಮ ಶಿಕ್ಷಣ ನೀಡಲು ಸಾಧ್ಯವಾಗುತ್ತಿತ್ತು ಎಂದು ಅವರು ನುಡಿದರು. ಶಬರಿಮಲೆ ಸಹಿತದ ಭಕ್ತರು ಸಲ್ಲಿಸಿದ ಹಣ ಹಾಗೂ ಚಿನ್ನವನ್ನು ಕೊಳ್ಳೆ ಹೊಡೆದಿರುವುದರ ಮೂಲಕ ರಾಜ್ಯ ಸರಕಾರದ, ದೇವಸ್ವಂ ಇಲಾಖೆಯ, ಎಡ-ಬಲ ಒಕ್ಕೂಟಗಳ ವಿಶ್ವಾಸವೇ ಕಳೆದುಹೋಗಿದೆಯೆಂದು, ಪಿಣರಾಯಿ ವಿಜಯನ್ ಸಿಪಿಎಂ ನೇತೃತ್ವದ ಜೊತೆಗೆ ಕಾಂಗ್ರೆಸ್‌ಗೂ ಉತ್ತರ ಹೇಳಬೇಕಾಗಿ ಬರಲಿದೆಯೆಂದು ಸದಾನಂದನ್ ನುಡಿದರು. ಮಹಿಳಾ ಮೋರ್ಛಾ ಜಿಲ್ಲಾ ಅಧ್ಯಕ್ಷೆ ಕೆ.ಎಸ್. ರಮಣಿ ಅಧ್ಯಕ್ಷತೆ ವಹಿಸಿದರು. ಬಿಜೆಪಿ ರಾಜ್ಯ ಸಮಿತಿ ಸದಸ್ಯೆ ಸವಿತಾ ಟೀಚರ್, ಜಿಲ್ಲಾ ಕೋಶಾಧಿಕಾರಿ ವೀಣಾ ಅರುಣ್ ಕುಮಾರ್ ಶೆಟ್ಟಿ, ಕಾರ್ಯದರ್ಶಿಗಳಾದ ಪುಷ್ಪಾ ಗೋಪಾಲನ್, ಪ್ರಮೀಳಾ ಮಜಲ್, ಅಶ್ವಿನಿ ಕೆ.ಎಂ, ಮಧೂರು ಪಂ.ಅಧ್ಯಕ್ಷೆ ಸುಜ್ಞಾನಿ ಶಾನುಭೋಗ್, ಮಹಿಳಾ ಮೋರ್ಛಾ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಅನಿತಾ ನಾಯ್ಕ್, ಪ್ರೇಮಲತಾ ಎಸ್ ಮಾತನಾಡಿದರು.






