ಮಂಜೇಶ್ವರ: ಮಂಜೇಶ್ವರ ವಿಧಾನಸಭಾ ಕ್ಷೇತ್ರದ ವಿವಿಧ ಪಕ್ಷಗಳ ಅಭ್ಯರ್ಥಿಗಳ ಬಿರುಸಿನ ಪ್ರಚಾರ ಮುಂದುವರಿಯುತ್ತಿದೆ. ಬಿಜೆಪಿಯ ಕೆ. ಸುರೇಂದ್ರನ್ ನಿನ್ನೆ ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯಲ್ಲಿ ಮತದಾರರನ್ನು ಭೇಟಿಯಾದರು. ಸಂಜೆ ವೇಳೆ ಹನುಮಾನ್ನಗರ ತೀರ ಪ್ರದೇಶಕ್ಕೆ ಭೇಟಿ ನೀಡಿ ಮೀನುಗಾರರ ಸಮಸ್ಯೆ ಬಗ್ಗೆ ಆಲಿಸಿದರು. ತೀವ್ರ ಕಡಲ್ಕೊರೆತ ಸಮಯದಲ್ಲೂ ಮೀನುಗಾರರು ತಮ್ಮ ಮನೆಗಳನ್ನು ಕಳೆದುಕೊಂಡಾಗಲೂ ತಿರುಗಿ ನೋಡದ ಶಾಸಕರಾಗಿದ್ದಾರೆ ಮಂಜೇಶ್ವರದಲ್ಲಿರುವುದೆಂದು ಸುರೇಂದ್ರನ್ ಆರೋಪಿಸಿದರು.
ಬಿಜೆಪಿ ದಕ್ಷಿಣಕನ್ನಡ ಜಿಲ್ಲಾ ಅಧ್ಯಕ್ಷ ಸತೀಶ್ ಕುಂಪಲ, ಬಿಜೆಪಿ ಕುಂಬಳೆ ಮಂಡಲ ಅಧ್ಯಕ್ಷ ಸುನಿಲ್ ಅನಂತಪುರ, ಒಬಿಸಿ ಮೋರ್ಚಾ ಜಿಲ್ಲಾಧ್ಯಕ್ಷ ಕೆ.ಪಿ. ವಲ್ಸರಾಜ್, ಜಿತೇಶ್ ಕಡಪ್ಪುರ, ಕಾರ್ಯಕರ್ತರಾದ ಮಾಧವ ಕಡಪ್ಪುರ, ಜ್ಯೋತಿರಾಜ್, ಕೃಷ್ಣ ಉಪಸ್ಥಿತರಿದ್ದರು.

ಎಡರಂಗದ ಅಭ್ಯರ್ಥಿ ಕೆ.ಆರ್. ಜಯಾನಂದ ನಿನ್ನೆ ಮಂಡಲದಲ್ಲಿ ಎರಡನೇ ಹಂತದ ಪರ್ಯಟನೆ ನಡೆಸಿ ಮತದಾರರನ್ನು ಭೇಟಿಯಾದರು. ಉದ್ಯಾವರ ಸಾವಿರ ಜಮಾಯತ್, ಕುಂಬಳೆ ಕೊಪಾಡಿ ಕಡಪ್ಪುರ, ಆರಿಕ್ಕಾಡಿ ಕಡವತ್, ಮಂಗಲ್ಪಾಡಿಯ ಬಂದ್ಯೋಡು, ಬೇರಿಕೆ, ಕನ್ನಟಿಪಾರೆ ಮೊದಲಾದ ಕಡೆಗಳಲ್ಲಿ ಮತ ಯಾಚನೆ ನಡೆಸಿದರು.

ಐಕ್ಯರಂಗದ ಅಭ್ಯರ್ಥಿ ಎಕೆಎಂ ಅಶ್ರಫ್ ನಿನ್ನೆ ರಾತ್ರಿ ಕುಂಬಳೆ ಕೊಪಾಡಿಯಲ್ಲಿ ಪ್ರಚಾರ ಕೈಗೊಂಡರು. ಕಳೆದ ೨೮ರಂದು ಪುತ್ತಿಗೆ ಪಂಚಾಯತ್ನಿಂದ ಆರಂಭಗೊಂಡ ಪರ್ಯಟನೆ ನಿನ್ನೆ ರಾತ್ರಿ ಕೊಪಾಡಿಯಲ್ಲಿ ಸಮಾಪ್ತಿಯಾಗಿದೆ. ಈ ವೇಳೆ ವಿವಿಧ ಕಡೆಗಳಲ್ಲಿ ಜನರು ಅಶ್ರಫ್ರನ್ನು ಸ್ವಾಗತಿಸಿದರು. ಇವರ ಜೊತೆ ಮಂಡಲ ಯುಡಿಎಫ್ ಅಧ್ಯಕ್ಷ ಅಸೀಸ್ ಮರಿಕೆ, ಸಂಚಾಲಕ ಮಂಜುನಾಥ ಆಳ್ವ ಸಹಿತ ಹಲವಾರು ಮಂದಿ ವಿವಿಧ ಕಡೆಗಳಲ್ಲಿ ಭಾಗವಹಿಸಿದರು.







