ಮೂರನೇ ಮಗು ಕೂಡಾ ಹೆಣ್ಣು: ನಿರಾಶೆಗೊಂಡ ಯುವಕ ಪತ್ನಿ, ಇಬ್ಬರು ಮಕ್ಕಳನ್ನು ನೀರಿನಲ್ಲಿ ಮುಳುಗಿಸಿ ಕೊಲೆ

ಹೈದರಾಬಾದ್: ಗರ್ಭಿಣಿಯಾದ ಪತ್ನಿಯನ್ನು ಹಾಗೂ ಇಬ್ಬರು ಚಿಕ್ಕ ಮಕ್ಕಳನ್ನು ಈಜುಕೊಳದಲ್ಲಿ ಮುಳುಗಿಸಿ ಕೊಲೆಗೈದ ಪ್ರಕರಣದಲ್ಲಿ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ತೆಲಂಗಾನ ಇನಾವೋಲು ಪುನ್ನೋಲು  ಗ್ರಾಮದಲ್ಲಿ ಇತ್ತೀಚೆಗೆ  ದಾರುಣವಾದ ಘಟನೆ ಸಂಭವಿಸಿದೆ. ಪತ್ನಿ ಫರ್ಹಾನ (26), ಮಕ್ಕಳಾದ ಉಮೇರ (9), ಆಯಿಶ(5) ಎಂಬಿವರನ್ನು ಕೊಲೆಗೈದ ಪ್ರಕರಣದಲ್ಲಿ ಹೋಲೋಬ್ರಿಕ್ಸ್ ನಿರ್ಮಾಣ ಘಟಕ ಮಾಲಕ ಅಸ್‌ಹರುದ್ದೀನ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಈ ಮೂರು ಮಂದಿಯ ಮೃತದೇಹಗಳನ್ನು ಈಜುಕೊಳದಿಂದ ಪತ್ತೆಹಚ್ಚಲಾಗಿದೆ. ಕಾಲುಜಾರಿ ಈಜುಕೊಳಕ್ಕೆ ಬಿದ್ದಿರುವುದಾಗಿ ಯುವಕ ಪೊಲೀಸರಲ್ಲಿ ಹೇಳಿಕೆ ನೀಡಿದ್ದಾನೆ. ಪುತ್ರಿಯ ಜನ್ಮ ದಿನಾಚರಣೆಯಂಗವಾಗಿ ಪತ್ನಿ ಹಾಗೂ ಮಕ್ಕಳ ಸಹಿದ ಅಸ್‌ಹರುದ್ದೀನ್  ಸಮೀಪದ ರಿಯಲ್ ಎಸ್ಟೇಟ್‌ಗೆ ಕರೆದೊಯ್ದಿರುವುದಾಗಿ ಫರ್ಹಾನರ ತಂದೆ ಎಸ್.ಕೆ.ಅಲಿ ಪೊಲೀಸರಲ್ಲಿ ಹೇಳಿಕೆ ನೀಡಿದ್ದಾರೆ. ಮರುದಿನ ಬೆಳಿಗ್ಗೆ ಅಸ್‌ಹರುದ್ದೀನ್ ಸಂಬಂಧಿಕರಿಗೆ ಕರೆ ಮಾಡಿ ಪತ್ನಿ ಹಾಗೂ ಮಕ್ಕಳು ಈಜುಕೊಳಕ್ಕೆ ಬಿದ್ದು ಮೃತಪಟ್ಟ ಬಗ್ಗೆ ತಿಳಿಸಿದ್ದನು. ಮಾಹಿತಿ ತಿಳಿದು ಕುಟುಂಬ ಸ್ಥಳಕ್ಕೆ ತಲುಪಿದಾಗ ಮೂರು ಮಂದಿಯ ಬಾಯಿಯಲ್ಲಿ ನೊರೆ  ಗಮನಕ್ಕೆ  ಬಂದಿದೆ. ಕೂಡಲೇ ಇವರು ಮೂವರನ್ನು ಆಸ್ಪತ್ರೆಗೆ ತಲುಪಿಸಿದರಾದರೂ ಸಾವು ಸಂಭವಿಸಿತ್ತು.  ಇತ್ತೀಚೆಗೆ ನಡೆಸಿದ ಸ್ಕ್ಯಾನಿಂಗ್‌ನಲ್ಲಿ ಮೂರನೇ ಮಗುವು ಕೂಡಾ ಹೆಣ್ಣು ಎಂದು ಖಚಿತಪಡಿಸಲಾಗಿತ್ತು. ಇದರಿಂದ ನಿರಾಶೆಹೊಂದಿದ ಅಸ್‌ಹರುದ್ದೀನ್ ಪತ್ನಿಯಲ್ಲಿ ಗರ್ಭಪಾತ ನಡೆಸಲು ಒತ್ತಾಯಿಸಿದ್ದನೆನ್ನಲಾಗಿದೆ. ಆದರೆ ಅದಕ್ಕೆ ಸಿದ್ಧಳಾಗಿರಲಿಲ್ಲ. ಈ ಮೊದಲು ಮೂರು ಬಾರಿ ಈತ ಪತ್ನಿಯ ಗರ್ಭಪಾತ ನಡೆಸಿದ್ದನೆಂದು ಸಂಬಂಧಿಕರು ತಿಳಿಸಿದ್ದಾರೆ. ಈ ಬಾರಿ ಆಕೆ ಅದಕ್ಕೆ ಸಿದ್ಧಳಾಗದಿರುವುದೇ ಮಕ್ಕಳನ್ನು ಹಾಗೂ ಆಕೆಯನ್ನು ಕೊಲೆಗೈಯ್ಯಲು ಕಾರಣವೆಂದು ಸಂಬಂಧಿಕರು ತಿಳಿಸಿದ್ದಾರೆ. ಫರ್ಹಾನಾಳ ತಂದೆ ನೀಡಿದ ದೂರಿನಂತೆ ಪೊಲೀಸರು ತನಿಖೆ ನಡೆಸಿದ್ದು,  ಅಸ್‌ಹರುದ್ದೀನ್‌ನನ್ನು ಬಂಧಿಸಿದ್ದಾರೆ.

You cannot copy contents of this page