ಚುನಾವಣಾ ಪ್ರಚಾರದ ಪರಾಕಾಷ್ಠೆಗೆ: ಇಂದು ಸಂಜೆ 6 ಗಂಟೆಗೆ ಬ್ರೇಕ್

ಕಾಸರಗೋಡು: ವಿಧಾನಸಭಾ ಚುನಾವಣೆಯ ಬಹಿರಂಗ ಪ್ರಚಾರದ ಪರಾಕಾಷ್ಠೆಗೆ ಇಂದು ಸಂಜೆ ಬ್ರೇಕ್ ಬೀಳಲಿದೆ.ಇದರಂತೆ ಅಭ್ಯರ್ಥಿಗಳು ಮತಯಾಚನೆಗಾಗಿ ಆರಂಭಿಸಿರುವ ಅಭಿಯಾನ  ಇಂದು ಸಂಜೆ ಆರು ಗಂಟೆಗೆ ಕೊನೆಗೊಳ್ಳಲಿದೆ.  ಈ ಅವಧಿಯೊಳಗಾಗಿ ತಮ್ಮ ಗರಿಷ್ಠ ಮತಗಳನ್ನು ಸೆಳೆದುಕೊಳ್ಳುವ ಅಂತಿಮ ಪ್ರಯತ್ನದಲ್ಲಿ ಇಂದು  ಬೆಳಿಗ್ಗಿನಿಂದಲೇ ಅಭ್ಯರ್ಥಿಗಳು, ಒಕ್ಕೂಟಗಳ ನೇತಾರರು ತೊಡಗಿದ್ದಾರೆ.

ಕಾಸರಗೋಡು ವಿಧಾನಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಅಶ್ವಿನಿ ಎಂ.ಎಲ್.  ನಿನ್ನೆ ಬದಿಯಡ್ಕ ಪಂಚಾಯತ್‌ನ ಮಾನ್ಯದಿಂದ ಪ್ರಚಾರ ಆರಂಭಿಸಿದ ಬಳಿಕ ವಿವಿಧೆಡೆಗಳಿಗೆ ಪ್ರಚಾರ ಪರ್ಯಟನೆ ನಡೆಸಿದರು. ಹಲವರು ನೇತಾರರು, ಕಾರ್ಯಕರ್ತರು ಭಾಗವಹಿಸಿದರು.ಯುಡಿಎಫ್‌ಅಭ್ಯರ್ಥಿ ಕಲ್ಲೆಟ್ರ ಮಾಹಿನ್ ನಿನ್ನೆ ಆಲಂಪಾಡಿಯಲ್ಲಿ ಯುಡಿಎಫ್ ಸಭೆಯಲ್ಲಿ ಭಾಗವಹಿಸುವ ಮೂಲಕ ಪರ್ಯಟನೆ ಆರಂಭಿಸಿದರು.  ಮುಸ್ಲಿಂ ಲೀಗ್ ರಾಜ್ಯ ಕಾರ್ಯದರ್ಶಿ ಡಾ.ಎಂ.ಕೆ. ಮುನೀರ್ ಉದ್ಘಾಟಿಸಿದರು. ಹಲವರು ಮಾತನಾಡಿದರು. ಅನಂತರ ಹಲವೆಡೆಗಳಿಗೆ ಪರ್ಯಟನೆ ನಡೆಸಿದರು.ಕಾಂಗ್ರೆಸ್ ಮತ್ತು ಮುಸ್ಲಿಂ ಲೀಗ್‌ನ ಹಲವು ನೇತಾರರು   ಜತೆಗಿದ್ದರು.ಎಡರಂಗ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಶಾನವಾಸ್ ಪಾದೂರು ನೇತೃತ್ವದಲ್ಲಿ ನಿನ್ನೆ ಸಂಜೆ ಕಾಸರಗೋಡು ನಗರದಲ್ಲಿ ಟಾರ್ಚ್ ಲೈಟ್ ರ‍್ಯಾಲಿ ನಡೆಸಲಾಯಿತು. ಇದರಲ್ಲಿ ಎಡರಂಗದ ಹಲವು ನೇತಾರರು ಮತ್ತು ಕಾರ್ಯಕರ್ತರು ಭಾಗವಹಿಸಿದರು.

ನಗರದ ಹೊಸ ಬಸ್ ನಿಲ್ದಾಣದಿಂದ ಆರಂಭಗೊಂಡ ಈ ರ‍್ಯಾಲಿ ಹಳೆ ಬಸ್ ನಿಲ್ದಾಣ ತನಕ ಮುಂದುವರಿಯಿತು. ಟಾರ್ಚ್ ಲೈಟ್  ಶಾನವಾಸ್ ಪಾದೂರುರ ಚುನಾವಣಾ ಚಿಹ್ನೆಯಾಗಿದೆ. ಅಶ್ವಿನಿ ಎಂ.ಎಲ್‌ರ ಚುನಾವಣಾ ಪ್ರಚಾರದಂಗವಾಗಿ  ಕಾಸರಗೋಡು ಲಲಿತಕಲಾ ಸದನದಲ್ಲಿ ನಿನ್ನೆ ಸನಾತನ ಯುವಕಲಾ ವೇದಿಕೆಯ ನೇತೃತ್ವದಲ್ಲಿ ಅರಸಿನ-ಕುಂಕುಮ ಸಾಂಸ್ಕೃತಿಕ ಕಾರ್ಯಕ್ರಮವೂ ನಡೆಯಿತು. ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಕಾರ್ಯಕ್ರಮ ಉದ್ಘಾಟಿಸಿದರು. ಹಲವು ಗಣ್ಯರು ಭಾಗವಹಿಸಿ ಮಾತನಾಡಿದರು.

ಬಹಿರಂಗ ಚುನಾವಣಾ ಪ್ರಚಾರದ ಕೊನೆಯ ದಿನವಾದ ಇಂದು ಸಂಜೆ ಕಾಸರಗೋಡು, ಬದಿಯಡ್ಕ ಮತ್ತು ಮುಳ್ಳೇರಿಯದಲ್ಲಿ ಎನ್‌ಡಿಎಯ ಮೆರವಣಿಗೆಗಳು ನಡೆಯಲಿದೆ. ಇದೇ ರೀತಿ  ಯುಡಿಎಫ್ ಮತ್ತು ಎಡರಂಗದ ಮೆರವಣಿಗೆಗಳು ಇಂದು ಸಂಜೆ ನಡೆದು 6 ಗಂಟೆಗೆ ಬಹಿರಂಗ ಚುನಾವಣಾ ಪ್ರಚಾರಕ್ಕೆ ತೆರೆಬೀಳಲಿದೆ.ರಾಜ್ಯದ ಎಲ್ಲಾ 140 ವಿಧಾನಸಭಾ ಕ್ಷೇತ್ರಗಳಲ್ಲಿ ಬಹಿರಂಗ ಚುನಾವಣಾ ಪ್ರಚಾರಕ್ಕೆ ಇಂದು ಸಂಜೆ 6 ಗಂಟೆಗೆ ತೆರೆಬೀಳಲಿದೆ. 

You cannot copy contents of this page