ನವದೆಹಲಿ: ಕೇರಳ ವಿಧಾನಸಭಾ ಚುನಾವಣೆಗೆ ಇನ್ನೇನು 48 ಗಂಟೆಗಳು ಬಾಕಿ ಇರುವಂತೆಯೇ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ಯುವತಿ ಯರ ಪ್ರವೇಶಕ್ಕೆ ಸಂಬಂಧಿಸಿ 2018ರ ತೀರ್ಪಿನ ಮರು ಪರಿಶೀಲನಾ ಅರ್ಜಿಗಳ ವಿಚಾರಣೆ ಸುಪ್ರೀಂಕೋರ್ಟ್ ನಲ್ಲಿ ಇಂದು ಬೆಳಿಗ್ಗೆ ಆರಂಭಗೊಂಡಿದೆ.
ಚುನಾವಣೆ ಹೊಸ್ತಿಲಲ್ಲೇ ಈ ಕಾನೂನು ಪ್ರಕ್ರಿಯೆಯು ನಡೆಯುತ್ತಿದ್ದು, ಅದು ಕೇರಳ ರಾಜಕೀಯ ವಲಯದಲ್ಲಿ ಭಾರೀ ಕುತೂಹಲ ಮೂಡಿಸಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ನೇತೃತ್ವದ ೯ ನ್ಯಾಯಮೂರ್ತಿ ಗಳು ಒಳಗೊಂಡ ಸಂವಿಧಾನಪೀಠ ಈ ಅರ್ಜಿಗಳ ವಿಚಾರಣೆ ನಡೆಸುತ್ತಿದೆ. ಧಾರ್ಮಿಕ ಆಚರಣೆಗಳಲ್ಲಿ ನ್ಯಾಯಾಲ ಯದ ಹಸ್ತಕ್ಷೇಪದ ಮಿತಿಯ ಬಗ್ಗೆ ಈ ಪೀಠವು ಚರ್ಚಿಸಲಿದೆ. ಕೇರಳದಲ್ಲಿ ಎಪ್ರಿಲ್ ೯ರಂದು ವಿಧಾನಸಭಾ ಚುನಾವಣೆ ನಡೆಯಲಿದ್ದು, ಈ ಸಮಯದಲ್ಲೇ ಶಬರಿಮಲೆ ವಿಷಯ ಕಾನೂನಿನ ಮುನ್ನೆಲೆಗೆ ಬಂದಿರುವುದು ರಾಜಕೀಯ ಪಕ್ಷಗಳಲ್ಲಿ ಸಂಚಲನ ಮೂಡಿಸಿದೆ. ಇದು ಮತದಾನದ ಮೇಲೆ ಪರಿಣಾಮ ಭೀರಬಹುದು ಎಂದೂ ವಿಶ್ಲೇಷಿಸಲಾಗುತ್ತಿದೆ.
ಇದೇ ಸಂದರ್ಭದಲ್ಲಿ ಶಬರಿಮಲೆ ಕ್ಷೇತ್ರಕ್ಕೆ ಯುವತಿಯರ ಪ್ರವೇಶಕ್ಕೆ ಅನುಕೂಲಕರವಾಗಿ 2018ರಂದು ಸುಪ್ರಿಂಕೋರ್ಟ್ ನೀಡಿದ ತೀರ್ಪು ಸರಿಯಲ್ಲವೆಂಬ ವಾದವನ್ನು ಕೇಂದ್ರ ಸರಕಾರ ಸುಪ್ರೀಂಕೋರ್ಟ್‌ಗೆ ಮಂಡಿಸಿದೆ. ಆ ಮೂಲಕ ಧಾರ್ಮಿಕ ಸಂಪ್ರದಾಯಗಳನ್ನು ಎತ್ತಿ ಹಿಡಿಯುವ ವಾದ ಮಂಡಿಸಿದೆ. ಶಬರಿಮಲೆ ಕ್ಷೇತ್ರಕ್ಕೆ ಯುವತಿಯರ ಪ್ರವೇಶಕ್ಕೆ ಅನುಮತಿ ನೀಡಿದ್ದಲ್ಲಿ ಅದು ಆರಾಧನಾ ರೀತಿಯನ್ನೇ ಬದಲಾಯಿಸಲಿದೆ. ದೇವರ ಮೇಲಿನ ನಂಬುಗೆ ವಿಷಯದಲ್ಲಿ ನ್ಯಾಯಾಲಯ ಮಧ್ಯೆ ಪ್ರವೇಶಿಸಬಾರದೆಂಬ ವಾದವೂ ಸೇರಿದಂತೆ ಒಟ್ಟು 246 ಪುಟಗಳು ಹೊಂದಿರುವ ವಾದವನ್ನು ಕೇಂದ್ರ ಸರಕಾರದ ಪರವಾಗಿ ಸೋಲಿಸಿಟ್ ಜನರಲ್ ತುಷಾರ್ ಮೆಹ್ತಾ ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ್ದಾರೆ. ಶಬರಿಮಲೆಗೆ ಯುವತಿಯರ ಪ್ರವೇಶಕ್ಕೆ ಅನುಕೂಲಕರವಾಗಿ ನೀಡಲಾದ ತೀರ್ಪನ್ನು ಮರು ಪರಿಶೀಲಿಸಬೇಕೆಂದು ಕೋರಿ 32 ಅರ್ಜಿಗಳು ಹಾಗೂ ಯುವತಿಯರ ಪ್ರವೇಶಕ್ಕೆ ಅನುಕೂಲಕರವಾಗಿ 12 ಅರ್ಜಿಗಳು ಸುಪ್ರಿಂಕೋರ್ಟ್‌ಗೆ ಸಲ್ಲಿಸಲ್ಪಟ್ಟಿವೆ. ಈ ಎಲ್ಲಾ ಅರ್ಜಿಗಳನ್ನು ಪರಿಶೀಲಿಸಿದ ಬಳಿಕ ಎಪ್ರಿಲ್ 22ರ ತನಕ ಅವುಗಳ ವಾದ ಪ್ರತಿವಾದಗಳನ್ನು ಸುಪ್ರೀಂ ಕೋರ್ಟ್ ಆಲಿಸಿದ ಬಳಿಕ ಅಂತಿಮ ತೀರ್ಪು ನೀಡಲಿದೆ.







