ಕಾಸರಗೋಡು: ತೀವ್ರ ಬಿಸಿಲಿನ ಹಿನ್ನೆಲೆಯಲ್ಲಿ ಗೇರು ಮರದಲ್ಲಿ ಹೂವು ಹಾಗೂ ಕಾಯಿಗಳು ಕರಟಿ ಹೋಗುವ ಸ್ಥಿತಿ ಉಂಟಾಗಿದೆ. ಬೆಲೆಯಿದ್ದರೂ ಉತ್ಪಾದನೆ ಇಲ್ಲದ ಕಾರಣ ಗೇರು ಕೃಷಿಕರ ಸಂಕಷ್ಟ ತಪ್ಪುವುದಿಲ್ಲ. ಜಿಲ್ಲೆಯಲ್ಲಿ ಬೇಸಿಗೆ ತೀವ್ರಗೊಂಡ ಹಿನ್ನೆಲೆಯಲ್ಲಿ ಹೂವು ಹಾಗೂ ಕಾಯಿ ಒಣಗಿ ನಾಶವಾಗಿರುವುದರೊಂದಿಗೆ ಗೇರುಬೀಜ ಕೃಷಿಕರ ಈ ಸೀಸನ್ನ ನಿರೀಕ್ಷೆಗಳೆಲ್ಲಾ ಕರಟಿಹೋಗಿದೆ. ಈ ವರ್ಷದ ಸೀಸನ್ನ ಆರಂಭದಲ್ಲಿ ಕಿಲೋಗೆ 145 ರೂ. ಆಗಿತ್ತು ಗೇರು ಬೀಜದ ಗ್ರಾಮೀಣ ಮಾರುಕಟ್ಟೆಗಳ ಚಿಲ್ಲರೆ ಮಾರಾಟ ಬೆಲೆ. ಆದರೆ ಜನವರಿ ಕೊನೆಯಾಗುವಾಗ ಬೆಲೆ 150ಕ್ಕೆ ತಲುಪಿದೆ. ನಿರೀಕ್ಷಿಸಿದ ರೀತಿಯಲ್ಲಿ ಮಾರುಕಟ್ಟೆಯಲ್ಲಿ ಗೇರುಬೀಜ ತಲುಪದ ಹಿನ್ನೆಲೆಯಲ್ಲಿ ಫೆಬ್ರವರಿ ಸಮಯಕ್ಕೆ 153 ರೂ.ವರೆಗೂ ತಲುಪಿದೆ. ಬಳಿಕ ಹಂತಹಂತವಾಗಿ ಹೆಚ್ಚಾಗಿ ಕಿಲೋಗೆ 158 ರೂ.ವರೆಗೂ ತಲುಪಿದೆ. ಆ ಬಳಿಕ ದರ ಇಳಿಕೆ ಆರಂಭಗೊಂಡಿದ್ದು, ಈಗ 153 ರೂ. ಚಿಲ್ಲರೆ ಮಾರಾಟ ಬೆಲೆಯಾಗಿದೆ. ಕಳೆದ ಕೆಲವು ವರ್ಷಗಳಿಂದ ಇತರೆಲ್ಲಾ ಕೃಷಿ ಉತ್ಪನ್ನಗಳಂತೆ ಗೇರುಬೀಜಕ್ಕೂ ಉತ್ತಮ ಬೆಲೆ ಲಭಿಸುತ್ತಿದೆ. ಈ ವಿಷಯವನ್ನು ಕೃಷಿಕರು ಒಪ್ಪುತ್ತಾರೆ. ಆದರೆ ಹವಾಮಾನದ ವೈಪರೀತ್ಯ ಹಾಗೂ ಅತೀ ಬಿಸಿಯಿಂದಾಗಿ ಉತ್ಪಾದನೆಗೆ ದೊಡ್ಡ ಮಟ್ಟಿನಲ್ಲಿ ಹೊಡೆತ ಲಭಿಸಿದ ಹಿನ್ನೆಲೆಯಲ್ಲಿ ಕೃಷಿಕರು ಕಣ್ಣೀರು ಸುರಿಸುತ್ತಿದ್ದಾರೆ.
ಜಿಲ್ಲೆಯ ಮಲೆನಾಡು ವಲಯದಲ್ಲಿ ಗೇರು ಬೀಜ ಉತ್ಪಾದನೆಯಲ್ಲಿ ಈ ವರ್ಷ ಭಾರೀ ಕುಸಿತ ಉಂಟಾಗಿದೆ. ಆದರೆ ಕಳೆದ ದಿನಗಳಲ್ಲಿ ಸುರಿದ ಮಳೆಗೆ ಒಣಗಿದ ಹೂವುಗಳು ಉದುರಿದ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಉತ್ಪಾದನೆಯಲ್ಲಿ ಬದಲಾವಣೆ ಉಂಟಾಗಬಹುದೆಂದು ಕೃಷಿಕರು ನಿರೀಕ್ಷಿಸುತ್ತಿದ್ದಾರೆ. ಆದರೆ ಮಳೆ ನಿರಂತರವಾಗಿ ಸುರಿದರೆ ಬೆಲೆ ಕಡಿಮೆಯಾಗಲು ಸಾಧ್ಯತೆ ಇದೆ. ಸರಕಾರಿ ಮಟ್ಟದಲ್ಲಿ ಕನಿಷ್ಠ ದರ ನಿಗದಿಪಡಿಸಿ ಗೇರು ಬೀಜ ಸಂಗ್ರಹ ಆರಂಭಿಸದ ಕಾರಣ ರಖಂ ವ್ಯಾಪಾರಿಗಳು ಒಂದೇ ಮಳೆಗೆ ಬೆಲೆ ಕಡಿಮೆ ಮಾಡುವ ಸಾಧ್ಯತೆ ಇದೆ ಎಂದು ಕೃಷಿಕರು ಹೇಳುತ್ತಾರೆ. ಸರಕಾರದ ಅಧೀನದಲ್ಲಿರುವ ಪ್ಲಾಂಟೇಶನ್ ಕಾರ್ಪೊರೇಶನ್ನ ಜಿಲ್ಲೆಯ ಗೇರು ತೋಟಗಳಲ್ಲಿ ಉತ್ಪಾದನೆ ಬಹಳ ಕಡಿಮೆ ಎಂದು ಹೇಳಲಾಗುತ್ತಿದೆ.







