ಸಂಕದಡಿ ಟಿಪ್ಪರ್ ಲಾರಿ ಚಾಲಕ ಸಾವನ್ನಪ್ಪಿದ ಘಟನೆ : ಇನ್ನೂ ಮುಂದುವರಿಯುತ್ತಿರುವ ನಿಗೂಢತೆ

ಕಾಸರಗೋಡು: ಪೊಯಿನಾಚಿಗೆ ಸಮೀಪದ ಮಂಡಲಿಪಾರ ಞಾಣಿಕಡವು ರಸ್ತೆಯ ಸಂಕದ ಅಡಿಯಲ್ಲಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾದ ಟಿಪ್ಪರ್ ಲಾರಿ ಚಾಲಕನ ಸಾವಿನ ಹಿಂದಿನ ನಿಗೂಢತೆ ಇನ್ನೂ ಮುಂದುವರಿಯುತ್ತಿದೆ.

ಬೆಂಡಿಚ್ಚಾಲ್ ಮಂಡಲಿಪ್ಪಾರ ನಿವಾಸಿ ಅಬ್ದುಲ್ ಕಬೀರ್ (40) ಎಂಬವರು ಕಳೆದ ಮಂಗಳವಾರ ಸಂಕದ ಅಡಿ ಭಾಗದಲ್ಲಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಅಂದು ಅಲ್ಲೇ ಪಕ್ಕದ  ತೋಟದಿಂದ ತೆಂಗಿನಕಾಯಿ ಕೊಯ್ಯುತ್ತಿದ್ದ ವ್ಯಕ್ತಿ ಮೃತದೇಹವನ್ನು ಮೊದಲು ಕಂಡಿದ್ದರು. ಈ ಬಗ್ಗೆ ಮಾಹಿತಿ ಲಭಿಸಿದ ಮೇಲ್ಪರಂಬ ಪೊಲೀಸರು ಸ್ಥಳಕ್ಕೆ ತಲುಪಿ ಮೃತದೇಹವನ್ನು ಮಹಜರು ನಡೆಸಿದ ಬಳಿಕ ಕಣ್ಣೂರು ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಸಾಗಿಸಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಅಬ್ದುಲ್ ಕಬೀರ್‌ರ ಮೃತದೇಹ ಪತ್ತೆಯಾಗುವ ವೇಳೆ ಸೊಂಟದ ಕೆಳ ಭಾಗದಲ್ಲಿ ಬಟ್ಟೆ ಇರಲಿಲ್ಲವೆನ್ನಲಾಗುತ್ತಿದೆ. ಅಲ್ಲದೆ ಒಳ ಉಡುಪು ಅಲ್ಲೇ ಸಮೀಪದಲ್ಲಿ  ಹಾಗೂ ಪ್ಯಾಂಟ್‌ನ್ನು ಮೃತದೇಹದ ತಲೆಯ ಅಡಿಭಾಗದಲ್ಲಿ ಇರಿಸಿದ ಸ್ಥಿತಿಯಲ್ಲಿತ್ತು. ಅಲ್ಲದೆ ಚಪ್ಪಲಿ ಹಾಗೂ ಮೊಬೈಲ್ ಫೋನ್ ಸಮೀಪದಿಂದ ಪೊಲೀಸರು ಪತ್ತೆಹಚ್ಚಿದ್ದಾರೆ. ಫೋನ್ ಸ್ವಿಚ್ ಆಫ್ ಆದ ಸ್ಥಿತಿಯಲ್ಲಿತ್ತು. ಕೆಂಪುಕಲ್ಲು ಸಾಗಿಸುವ ಟಿಪ್ಪರ್ ಲಾರಿಯ ಚಾಲಕನಾಗಿ ಅಬ್ದುಲ್ ಕಬೀರ್ ಕೆಲಸ ನಿರ್ವಹಿಸುತ್ತಿದ್ದರು. ಇವರು ಸಂಕದಿಂದ ಕೆಳಗೆ ಬಿದ್ದು ಸಾವನ್ನಪ್ಪಿದ್ದಾರೆಯೇ ಅಥವಾ ಇವರನ್ನು ಕೊಲೆಗೈಯ್ಯಲಾಗಿದೆಯೇ ಎಂಬುವುದು ಸ್ಪಷ್ಟಗೊಂಡಿಲ್ಲ. ಮರಣೋತ್ತರ ಪರೀಕ್ಷಾ ವರದಿ ಲಭಿಸಿದ ಬಳಿಕವೇ ಸಾವಿಗೆ ಕಾರಣವೇನೆಂದು ತಿಳಿಯಲು ಸಾಧ್ಯವಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತದೇಹ ಪತ್ತೆಯಾದ ಸ್ಥಳಕ್ಕೆ ಬೆರಳಚ್ಚು ತಜ್ಞರು ಹಾಗೂ ಶ್ವಾನದಳ ತಲುಪಿ ಮಾಹಿತಿಯನ್ನು ಸಂಗ್ರಹಿಸಿದ್ದಾರೆ. ಅಬ್ದುಲ್ ಕಬೀರ್‌ರ ಸಹೋದರ ಎಂ.ಬಿ. ಸಿದ್ದೀಕ್ ನೀಡಿದ ದೂರಿನಂತೆ ಮೇಲ್ಪರಂಬ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಅಬ್ದುಲ್ ರಹಿಮಾನ್- ಖದೀಜ ದಂಪತಿಯ ಪುತ್ರನಾದ ಮೃತರು ಪತ್ನಿ ಜಸೀರ, ಸಹೋದರ ಸಿದ್ದಿಕ್, ಸಹೋದರಿಯರಾದ ಬೀವಿ, ಫರೀದ ಮೊದಲಾದವರನ್ನು ಅಗಲಿದ್ದಾರೆ.

RELATED NEWS

You cannot copy contents of this page