ಮಂಜೇಶ್ವರ: ಇಡೀ ನಾಡನ್ನೇ ಬೆಚ್ಚಿ ಬೀಳಿಸಿದ ಕುಖ್ಯಾತ ದರೋಡೆಕೋರ ರಿಪ್ಪರ್ ಚಂದ್ರನ್ಗೆ ಗಲ್ಲು ಶಿಕ್ಷೆ ಲಭಿಸಿದ ಪ್ರಕರಣದಲ್ಲಿ ನೇರ ಸಾಕ್ಷಿಯಾಗಿದ್ದ ವ್ಯಕ್ತಿ ಮನೆಯೊಳಗೆ ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮಂಜೇಶ್ವರ ವಾಮಂಜೂರು ಚೆಕ್ಪೋಸ್ಟ್ ಶ್ರೀ ಶಾಸ್ತಾವೇಶ್ವರ ಕ್ಷೇತ್ರ ಸಮೀಪದ ಶ್ರೀ ಶಾಸ್ತಾ ನಿಲಯದ ಬಾಲಚಂದ್ರ (53) ಎಂಬವರು ಮೃತಪಟ್ಟ ವ್ಯಕ್ತಿಯಾಗಿದ್ದಾರೆ. ಕಳೆದ ಮೂರು ದಿನಗಳಿಂದ ಇವರು ಫೋನ್ ಕರೆ ಸ್ವೀಕರಿಸದ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿರುವ ಸಹೋದರಿ ಶಶಿಕಲ ನಿನ್ನೆ ಸಂಜೆ ಮನೆಗೆ ತಲುಪಿ ನೋಡಿದಾಗ ಮೃತದೇಹ ಕಂಡು ಬಂದಿದೆ. ಮನೆಯ ಒಳಗಿನಿಂದ ಬಾಗಿಲು ಮುಚ್ಚಿದ ಸ್ಥಿತಿಯಲ್ಲಿತ್ತು. ಪೊಲೀಸರು ತಲುಪಿ ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆ ಶವಾಗಾರಕ್ಕೆ ತಲುಪಿಸಿದ್ದಾರೆ. ದಿವಂಗತರಾದ ನರಸಪ್ಪಯ್ಯ ಹಂದೆ- ಇಂದಿರಾ ಹಂದೆ ದಂಪತಿಯ ಪುತ್ರನಾದ ಬಾಲಚಂದ್ರ ಕ್ಷೇತ್ರಗಳಲ್ಲಿ ಸಹಾಯಕ ಅರ್ಚಕನಾಗಿ ಕೆಲಸ ನಿರ್ವಹಿಸುತ್ತಿದ್ದರು. ಇವರಿಗೆ ಭಾರತಿ ಎಂಬ ಇನ್ನೋರ್ವ ಸಹೋದರಿಯೂ ಇದ್ದಾರೆ.
ರಿಪ್ಪರ್ ಚಂದ್ರನ್ನನ್ನು ಗಲ್ಲಿಗೇರಿಸಿದ್ದು ಬಾಲಚಂದ್ರರ ಹೇಳಿಕೆ ಪ್ರಕಾರ
ಈಗ ಮೃತಪಟ್ಟ ಬಾಲಚಂದ್ರರಿಗೆ ೧೩ ವರ್ಷ ಪ್ರಾಯವಿದ್ದಾಗ ತಂದೆ ನರಸಪ್ಪಯ್ಯ ಹಂದೆ ಹಾಗೂ ಅವರ ಕೆಲಸಗಾರನಾದ ವಿಶ್ವನಾಥ ಎಂಬಿವರನ್ನು ರಿಪ್ಪರ್ ಚಂದ್ರನ್ ತಲೆಗೆ ಹೊಡೆದು ಕೊಲೆಗೈದಿದ್ದನು. ತಾಯಿ ಇಂದಿರಾ ಹಂದೆಯನ್ನು ಕೊಲೆಗೈಯ್ಯಲು ಪ್ರಯತ್ನ ನಡೆದಿತ್ತು. ತಲೆಗೆ ಬಿದ್ದ ಏಟಿನಿಂದ ಗಾಯಗೊಂಡ ಇಂದಿರಾ ದೀರ್ಘ ಕಾಲ ಅರೆಪ್ರಜ್ಞಾವಸ್ಥೆಯಲ್ಲಿದ್ದರು. ಬಳಿಕ ಚೇತರಿಸಿಕೊಂಡಿದ್ದರು. ವೃದ್ದಾಪ್ಯ ಸಹಜ ಅಸೌಖ್ಯದಿಂದ ಅವರು ಬಳಿಕ ಮೃತಪಟ್ಟಿದ್ದಾರೆ.
೧೯೮೫ರಲ್ಲಿ ನಾಡನ್ನು ಬೆಚ್ಚಿ ಬೀಳಿಸಿದ ಅವಳಿ ಕೊಲೆ ಕೃತ್ಯ ನಡೆದಿದೆ. ವಿಶ್ವನಾಥ ಮನೆ ವರಾಂಡದಲ್ಲಿ ನಿದ್ರಿಸಿದ್ದರು. ಮೊದಲು ಇವರನ್ನು ತಲೆಗೆ ಹೊಡೆದು ರಿಪ್ಪರ್ ಚಂದ್ರ ಕೊಲೆಗೈದಿದ್ದಾನೆ. ಅನಂತರ ಮನೆಯ ಮೇಲೆ ಹತ್ತಿ ಹೆಂಚು ತೆಗೆದು ಒಳಗೆ ಪ್ರವೇಶಿಸಿದ ಬಳಿಕ ನರಸಪ್ಪಯ್ಯ ಹಂದೆಯವರನ್ನು ತಲೆಗೆ ಹೊಡೆದು ಕೊಲೆಗೈದಿದ್ದಾನೆ. ಇಂದಿರಾರಿಗೂ ಹಲ್ಲೆಗೈದು ಗಾಯಗೊಳಿಸಿದ್ದನು. ಈ ಪೈಶಾಚಿಕ ಕೊಲೆ ಕೃತ್ಯದಲ್ಲಿ ಬಾಲಚಂದ್ರ ಸಾಕ್ಷಿಯಾಗಿದ್ದರು. ಅಂದು ಅವರಿಗೆ 13 ವರ್ಷ, ಸಹೋದರಿಯರಿಗೆ 6 ಹಾಗೂ 2 ವರ್ಷ ಪ್ರಾಯವಾಗಿತ್ತು. ವಾಮಂಜೂರು ಅವಳಿ ಕೊಲೆಯ ಬಳಿಕ ೧೪ ಕೊಲೆ ಪ್ರಕರಣಗಳಲ್ಲಿ ರಿಪ್ಪರ್ ಚಂದ್ರನ್ ಆರೋಪಿಯಾಗಿದ್ದನು. 13 ಕೊಲೆ ಪ್ರಕರಣಗಳಲ್ಲಿ ವಿವಿಧ ನ್ಯಾಯಾಲಯಗಳು ಜೀವಾವಧಿ ಶಿಕ್ಷೆ ವಿಧಿಸಿವೆ. ಆದರೆ ವಾಮಂಜೂರು ಕೊಲೆ ಪ್ರಕರಣದಲ್ಲಿ ಬಾಲಚಂದ್ರ ನೀಡಿದ ಹೇಳಿಕೆಯನ್ನು ಪರಿಗಣಿಸಿ ಸಾವಿನವರೆಗೆ ಗಲ್ಲುಶಿಕ್ಷೆ ವಿಧಿಸಿ ನ್ಯಾಯಾಲಯ ತೀರ್ಪು ನೀಡಿತ್ತು. ತೀರ್ಪಿನ ವಿರುದ್ಧ ಸುಪ್ರೀಂಕೋರ್ಟ್ ವರೆಗೆ ಆರೋಪಿ ತೆರಳಿದರೂ ಗಲ್ಲು ಶಿಕ್ಷೆಯನ್ನು ಖಾಯಂಗೊಳಿಸಿ ತೀರ್ಪು ನೀಡಲಾಗಿತ್ತು. ಅನಂತರ ರಾಷ್ಟ್ರಪತಿಗೆ ಆತ ಕ್ಷಮೆಯಾಚಿಸಿ ಅರ್ಜಿ ಸಲ್ಲಿಸಿದ್ದನು. 1991 ಜುಲೈ 6ರಂದು ರಿಪ್ಪರ್ ಚಂದ್ರನ್ನನ್ನು ಕಣ್ಣೂರು ಸೆಂಟ್ರಲ್ ಜೈಲಿನಲ್ಲಿ ಗಲ್ಲಿಗೇರಿಸಲಾಯಿತು. ಅಂದು ಕಣ್ಣೂರು ಸೆಂಟ್ರಲ್ ಜೈಲ್ನಲ್ಲಿ ನೇಣಿಗೇರಿಸುವ ವ್ಯಕ್ತಿಗಳು ಇಲ್ಲದುದರಿಂದ ಜೈಲು ಸೂಪ ರಿಂಟೆಂಡೆಂಟ್ ಅರೆಯಕಂಡಿಪ್ಪಾರ ಎನ್.ಪಿ. ಕರುಣಾಕರನ್ ಗಲ್ಲುಶಿಕ್ಷೆಯನ್ನು ನಿರ್ವಹಿಸಿದ್ದಾರೆ.






