ಬಂದ್ಯೋಡು ಅಡ್ಕದಲ್ಲಿ ಮೂರು ಮನೆಗಳಿಂದ ಕಳವಿಗೆತ್ನ: ಕಳ್ಳನ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ; ತನಿಖೆ ತೀವ್ರಗೊಳಿಸಿದ ಪೊಲೀಸ್

ಕುಂಬಳೆ: ಬಂದ್ಯೋಡು ಅಡ್ಕ ಎಂಬಲ್ಲಿನ 3 ಮನೆಗಳಲ್ಲಿ ನಡೆದ ಕಳವು ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು  ಪ್ರಕರಣ ದಾಖಲಿಸಿ ತನಿಖೆ ತೀವ್ರಗೊಳಿಸಿದ್ದಾರೆ.  ಅಡ್ಕ ಚುಕ್ರಿಯಡ್ಕದ ಹನೀಫ, ನೆರೆಮನೆ ನಿವಾಸಿಗಳಾದ ಮುಹಮ್ಮದ್, ಅಬ್ದುಲ್ಲ ಎಂಬಿವರ ಮನೆಗಳಿಂದ ಕಳವಿಗೆತ್ನ ನಡೆದಿದೆ. ನಿನ್ನೆ ಮುಂಜಾನೆ 4 ಗಂಟೆ ವೇಳೆ ಹನೀಫರ ಮನೆಗೆ ಕಳ್ಳ ನುಗ್ಗಿದ್ದಾನೆ. ಅಡುಗೆಕೋಣೆ ಭಾಗದ ಬಾಗಿಲನ್ನು ತೆರೆದು ಒಳನುಗ್ಗಿದ ಕಳ್ಳ ಮೇಲಂತಸ್ತಿನ ಕೊಠಡಿಗೆ ತಲುಪಿದ್ದನು. ಅಲ್ಲಿದ್ದ ಕಪಾಟುಗಳನ್ನು ತೆರೆದು ಬಟ್ಟೆಬರೆಗಳನ್ನೆಲ್ಲ ಚೆಲ್ಲಾಪಿಲ್ಲಿಗೊಳಿಸಿ ದ್ದಾನೆ. ಬಳಿಕ ಹನೀಫ ಹಾಗೂ ಪತ್ನಿ ನಿದ್ರಿಸಿದ್ದ ಕೊಠಡಿಗೆ ಕಳ್ಳ ತಲುಪಿದ್ದಾನೆ. ಈ ವೇಳೆ ಹನೀಫರ ಪತ್ನಿ ಎಚ್ಚರಗೊಂಡು ಬೊಬ್ಬೆ ಹಾಕಿದ್ದಾರೆ. ಅಷ್ಟರಲ್ಲಿ ಕಳ್ಳ ಓಡಿ ಪರಾರಿಯಾಗಿದ್ದಾನೆ. ಈ ಮನೆಯಿಂದ ಪರ್ಸ್‌ನಲ್ಲಿದ್ದ 1800 ರೂಪಾಯಿ ಮಾತ್ರವೇ ಕಳ್ಳನಿಗೆ ಲಭಿಸಿದೆಯೆಂದು ಹೇಳಲಾಗುತ್ತಿದೆ. ಪ್ಯಾಂಟ್, ಶರ್ಟ್ ಧರಿಸಿದ  ಕಳ್ಳ ಮುಖವಾಡ   ಹಾಗೂ  ಕೈಗೆ ಗ್ಲೌಸ್ ಧರಿಸಿದ್ದನು.  ಈತನ ದೃಶ್ಯಗಳು ಮನೆಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

 ಅನಂತರ ಮುಹಮ್ಮದ್‌ರ ಮನೆಯಲ್ಲಿ ಕಳವು ನಡೆಸಲು ಯತ್ನಿಸಿದ್ದರೂ  ಕಳ್ಳನಿಗೆ ಯಾವುದೇ ಪ್ರಯೋಜನವಾಗಲಿಲ್ಲ. ಕಳ್ಳ ಧರಿಸಿದ್ದ  ಮುಖವಾಡ ಈ ಮನೆಯ ಮುಂಭಾಗದಲ್ಲಿ ಉಪೇಕ್ಷಿಸಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಇದೇ ರೀತಿಯಲ್ಲಿ ಇದೇ ಪರಿಸರದ ಅಬ್ದುಲ್ಲ ಎಂಬವರ ಮನೆಯಲ್ಲೂ ಮುಂಜಾನೆ ೪ ಗಂಟೆ ವೇಳೆ ಕಳವು ಯತ್ನ ನಡೆದಿದೆ. ಅಬ್ದುಲ್ಲ ಮುಂಜಾನೆ 3 ಗಂಟೆಗೆ ಮಸೀದಿಗೆ ತೆರಳಿದ್ದರು. ಈ ಹೊತ್ತಿನಲ್ಲಿ ಮುಖವಾಡ ಧರಿಸಿದ ಕಳ್ಳ ಮನೆಗೆ ತಲುಪಿದ್ದಾನೆ. ಈ ಮನೆಯಿಂದಲೂ ಕಳ್ಳನ ದೃಶ್ಯಗಳು ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ದೃಶ್ಯಗಳನ್ನು ಗಲ್ಫ್‌ನಲ್ಲಿರುವ ಪುತ್ರ ಇದೇ ಸಂದರ್ಭ ದಲ್ಲಿ ಕಂಡಿದ್ದರು. ಇದರಿಂದ ಅವರು ಕೂಡಲೇ ಮನೆಯವರಿಗೆ ಫೋನ್ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಮನೆಯವರು ಬೊಬ್ಬೆ ಹಾಕಿದಾಗ ಕಳ್ಳ ಅಲ್ಲಿಂದ ಓಡಿ ಪರಾರಿಯಾಗಿದ್ದಾನೆ. ವಿಷಯ ತಿಳಿದು ಕುಂಬಳೆ ಪೊಲೀಸರು ಕಳವು ಯತ್ನ ನಡೆದ ಮನೆಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

You cannot copy contents of this page