ತಮಿಳುನಾಡು, ಪ. ಬಂಗಾಳ ವಿಧಾನಸಭಾ ಚುನಾವಣೆ: 5,501 ಅಭ್ಯರ್ಥಿಗಳ ರಾಜಕೀಯ ಭವಿಷ್ಯ ನಿರ್ಧಾರ ಇಂದು

ಚೆನ್ನೈ: ತಮಿಳುನಾಡು ಮತ್ತು ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಮತದಾನ ಇಂದು ಬೆಳಿಗ್ಗೆ ಆರಂಭಗೊಂಡಿದೆ. ತಮಿಳುನಾಡಿನ ಒಟ್ಟು ೨೩೪  ಕ್ಷೇತ್ರಗಳಲ್ಲಿ ಒಂದೇ ಹಂತದಲ್ಲಿ ಇಂದು ಮತದಾನ ನಡೆಯುತ್ತಿದ್ದರೆ  ಪಶ್ಚಿಮಬಂಗಾಳ  ವಿಧಾನಸಭೆಗೆ ಎರಡು ಹಂತಗಳಲ್ಲಾಗಿ ನಡೆಯುವ ಚುನಾವಣೆಯಲ್ಲಿ ಒಂದನೇ ಹಂತದಲ್ಲಿ 152 ಕ್ಷೇತ್ರಗಳಿಗೆ ಇಂದು ಮತದಾನ ನಡೆಯುತ್ತಿದೆ. ಹೀಗೆ ತಮಿಳುನಾಡಿನ 234 ಮತ್ತು ಪಶ್ಚಿಮಬಂಗಾಳದ 152 ಕ್ಷೇತ್ರಗಳಿಗೆ ನಡೆಯುವ ಚುನಾವಣೆಯಲ್ಲಿ ಒಟ್ಟು 5501 ಅಭ್ಯರ್ಥಿಗಳು ಸ್ಪರ್ಧಾ ಕಣದಲ್ಲಿದ್ದು ಇವರ ರಾಜಕೀಯ ಭವಿಷ್ಯ ವನ್ನು 9.33 ಕೋಟಿ ಮತದಾರರು ಇಂದು ನಿರ್ಣಯಿಸಲಿದ್ದಾರೆ.

ಮತದಾನ ಈತನಕ ಶಾಂತಿಯುತವಾಗಿ ಮುಂದುವರಿದಿದೆ. ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ನೇತೃತ್ವದ ಡಿಎಂಕೆ,  ಪಳನಿಸ್ವಾಮಿ ನೇತೃತ್ವದ ಎಐಡಿಎಂಕೆ ನೇತೃತ್ವದ ರಾಜಕೀಯ ಒಕ್ಕೂಟ, ನಟ ವಿಜಯ್ ನೇತೃತ್ವದ ಟಿವಿಕೆ ಪಕ್ಷಗಳ ನಡುವೆ ಪ್ರಬಲ ಪೈಪೋಟಿ ಏರ್ಪಟ್ಟಿದೆ.

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಆಡಳಿತಾರೂಢ ಟಿಎಂಸಿ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. 

ತಮಿಳುನಾಡು ವಿಧಾನಸಭಾ ಚುನಾವಣೆಗಿರುವ ಮತದಾನ ಇಂದು ಬೆಳಿಗ್ಗೆ ಆರಂಭಗೊಂಡಿರುವಂತೆಯೇ ಸಿನಿಮಾ ನಟರಾದ ರಜನೀಕಾಂತ್,  ಕಮಲ್‌ಹಾಸನ್, ಅಜಿತ್ ಕುಮಾರ್, ಟಿವಿಕೆ ನಾಯಕ ನಟ ವಿಜಯ್, ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಸೇರಿದಂತೆ ಹಲವು ಗಣ್ಯರು ಇಂದು ಬೆಳಿಗ್ಗೆಯೇ ಮತಗಟ್ಟೆಗಳಿಗೆ ಆಗಮಿಸಿ  ಮತ ಚಲಾಯಿಸಿದರು.

ಮತದಾನ ಪ್ರಕ್ರಿಯೆ ಶಾಂತಿಯುತವಾಗಿ ನಡೆಯಲು ಚುನಾವಣಾ ಆಯೋಗ ಈ ಎರಡೂ ರಾಜ್ಯಗಳಲ್ಲಿ ಲಕ್ಷಾಂತರ ಭದ್ರತಾ ಸಿಬ್ಬಂದಿಗಳನ್ನು ನೇಮಿಸಿದೆ.  ಸೂಕ್ತ ಸಂವೇದಿ ಪ್ರದೇಶಗಳಲ್ಲಿ ಹೆಚ್ಚುವರಿ ಕೇಂದ್ರೀಯ ಪಡೆಗಳನ್ನು ನೇಮಿಸಲಾಗಿದೆ.  ಡ್ರೋನ್ ಮತ್ತು ಸಿಸಿ ಟಿವಿಗಳ ಮೂಲಕ ಎಲ್ಲೆಡೆಗಳಲ್ಲಿ ತೀವ್ರ ನಿಗಾ ಇರಿಸಲಾಗಿದೆ.

ತಮಿಳುನಾಡಿನ ಒಟ್ಟು 234 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟಾರೆಯಾಗಿ 4,023 ಅಭ್ಯರ್ಥಿಗಳು ಸ್ಪರ್ಧಾ ಕಣದಲ್ಲಿದ್ದಾರೆ.  ಇವರ ಸೋಲು ಗೆಲುವನ್ನು 5,73,42,291 ಮತದಾರರು ಇಂದು ನಿರ್ಣಯಿಸಲಿದ್ದಾರೆ.

You cannot copy contents of this page