ಬರಡು ನೆಲದಲ್ಲಿ ಕೃಷಿ ಸಾಧನೆ: ಡಾ. ರತ್ನಾಕರ ಮಲ್ಲಮೂಲೆಯವರಿಗೆ ವನಮಿತ್ರ ಪುರಸ್ಕಾರ

ನೀರ್ಚಾಲು : ಇಲ್ಲಿಗೆ ಸಮೀಪದ ಬುರುಡಡ್ಕ ಎಂಬ ಬರಡು ಬಂಜರು ನೆಲವನ್ನು ಹದಗೊಳಿಸಿ, ಕೃಷಿಭೂಮಿಯನ್ನಾಗಿ ಪರಿವರ್ತಿಸಿದ ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಹಾಗೂ ಸಂಶೋಧಕ ಡಾ. ರತ್ನಾಕರ ಮಲ್ಲಮೂಲೆ ಕೇರಳ ಸರಕಾರದ ಅರಣ್ಯ ಇಲಾಖೆ ನೀಡುವ ಪ್ರತಿಷ್ಠಿತ ವನಮಿತ್ರ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ. ಇವರು ಮೂರ್ನಾಲ್ಕು ವರ್ಷಗಳ ಕಠಿಣ ಪರಿಶ್ರಮದಿಂದ ಬನವಾಸಿ ಎಂಬ ಹೆಸರಿನಲ್ಲಿ ರೂಪಿಸಿದ ಈ ಸ್ಥಳ ಈಗ ಹಸಿರಿನಿಂದ ಕಂಗೊಳಿಸುತ್ತಿದ್ದು, ಪರಿಸರ ಜಾಗೃತಿಯ ಸ್ಥಳವಾಗಿ ರೂಪುಗೊಂಡಿದೆ. ಅದೇ ರೀತಿಯಲ್ಲಿ ಇವರ ಪರಿಸರಸ್ನೇಹಿ ಮನೆ ಜನರ ಆಕರ್ಷಣೆಯ ಕೇಂದ್ರವಾಗಿದೆ. ದಿನನಿತ್ಯ ಈ ಸ್ಥಳವನ್ನು ನೋಡಲು ಶಾಲಾ – ಕಾಲೇಜು ಮಕ್ಕಳು ಸೇರಿದಂತೆ ವಿವಿಧ ವಲಯದ ವ್ಯಕ್ತಿಗಳು ಬರುತ್ತಿದ್ದಾರೆ. ಮಳೆನೀರನ್ನು ಅತ್ಯಂತ ವ್ಯವಸ್ಥಿತ ವೈಜ್ಞಾನಿಕ ಮಾದರಿಯಲ್ಲಿ ಸಂಗ್ರಹಿಸುವ ಮಳೆಕೊಯ್ಲು ಕೊಳ, ಸೂರ್ಯ ಚೈತನ್ಯವನ್ನು ಸದುಪಯೋಗಪಡಿಸುವ ಸೌರಶಕ್ತಿ ವ್ಯವಸ್ಥೆ, ಜಲಮರುಪೂರಣ ವ್ಯವಸ್ಥೆ, ಸಾಂಪ್ರದಾಯಿಕ ಬಾವಿಯ ಸಂರಕ್ಷಣೆಯ ಮೂಲಕ ಶುದ್ಧಜಲದ ಸದುಪಯೋಗ, ಅಮೂಲ್ಯ ತಳಿಗಳ ಔಷಧೀಯ ತೋಟ, ವಿವಿಧ ಫಲಗಿಡಗಳ ಪೋಷಣೆ, ಕಂಗು, ತೆಂಗು, ಕರಿಮೆಣಸು, ವಿವಿಧ ತರಕಾರಿ ಗಿಡಗಳು ಸೇರಿದಂತೆ ಬಹುವಿಧ ಕೃಷಿಯೋಜನೆಗೆ ಬನವಾಸಿಯು ಮಾದರಿಯಾಗಿದೆ. ಕೆಂಪುಕಲ್ಲಿನ, ನೀರಿನ ಸೆಲೆಯಿಲ್ಲದ ನೀರ್ಚಾಲಿನ ಎತ್ತರದ ಈ ಪ್ರದೇಶವನ್ನು ಬಯಲಿನ ರೂಪದಲ್ಲಿ ಪರಿವರ್ತನೆಗೊಳಿಸುವಲ್ಲಿ ಮಲ್ಲಮೂಲೆಯವರ ಅವಿರತ ಶ್ರಮ ಹಾಗೂ ವೈಜ್ಞಾನಿಕ ದೂರದೃಷ್ಟಿಕೋನಗಳಿವೆ. ಕೇಂದ್ರ ಮತ್ತು ರಾಜ್ಯಸರಕಾರಗಳು ಪರಿಸರಜಾಗೃತಿ ಮೂಡಿಸುವ ಪಾಕೃತಿಕ ಚೈತನ್ಯ ಸಂಪನ್ಮೂಲಗಳ ಸದ್ಭಳಕೆಯ ಪ್ರತಿಯೊಂದು ಮಾದರಿಯನ್ನು ಬನವಾಸಿಯಲ್ಲಿ ಕಾಣಬಹುದು. ಹೀಗೆ ಸಾಮಾಜಿಕ ಜಾಗೃತಿಗಾಗಿ ಹಸಿರು ಯೋಜನೆಯನ್ನು ತೆರೆದಿಟ್ಟ ಮಲ್ಲಮೂಲೆಯವರ ಹಸಿರು ಪ್ರೀತಿಯನ್ನು ಸರಕಾರದ ವಿವಿಧ ಇಲಾಖೆಗಳು ಪ್ರಶಂಸಿವೆ. ಕೇರಳ ಸರಕಾರದ ಅರಣ್ಯ ಇಲಾಖೆಯು ಈ ಸಲದ ವನಮಿತ್ರ ಪ್ರಶಸ್ತಿಗೆ ಇವರನ್ನು ಆಯ್ಕೆ ಮಾಡಿದೆ.

You cannot copy contents of this page