ಮನೆಯಿಂದ 45 ಪವನ್ ಚಿನ್ನ ಕಳವು : ಕೃತ್ಯದಲ್ಲಿ ಕುಖ್ಯಾತ ಕ್ರಿಮಿನಲ್ ತಂಡ ಶಂಕೆ ; ಚಿನ್ನ ಕಂಡಾಗ ಮಿಠಾಯಿ ಗಂಟು ಮರೆತು ಹೋದ ಕಳ್ಳರು

ಕಾಸರಗೋಡು: ಬೇಕಲ ಪೊಲೀಸ್ ಸ್ಟೇಷನ್ ವ್ಯಾಪ್ತಿಯ ಪಳ್ಳಿಕ್ಕೆರೆ, ಪೂಚಕ್ಕಾಡ್ ಅನಿವಾಸಿಯ ಮನೆಯಿಂದ 45 ಪವನ್ ಚಿನ್ನಾಭರಣ ಹಾಗೂ ೫೦,೦೦೦ ರೂ. ಕಳವುಗೈದ ಪ್ರಕರಣದಲ್ಲಿ ಪ್ರತ್ಯೇಕ ಪೊಲೀಸ್ ತಂಡ ತನಿಖೆ ತೀವ್ರಗೊಳಿಸಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯ ಸ್ಕ್ವಾಡ್‌ನ ಸಹಾಯದೊಂದಿಗೆ ಬೇಕಲ ಡಿವೈಎಸ್‌ಪಿಯವರ ನೇತತ್ವದಲ್ಲಿರುವ ತನಿಖಾ ತಂಡ ತನಿಖೆ ನಡೆಸುತ್ತಿದೆ. ಪೂಚಕ್ಕಾಡ್ ಅರಯಾಲ್ತರದಲ್ಲಿ ಅನಿವಾಸಿಯಾದ ಅಬ್ದುಲ್ ಮಜೀದ್‌ರ ಮನೆಯಿಂದ ಇತ್ತೀಚೆಗೆ ಕಳವು ನಡೆಸಲಾಗಿತ್ತು. ಮನೆಯ ಮುಂಭಾಗದ ಬಾಗಿಲು ಹಾನಿಗೊಳಿಸಿ ಒಳಗೆ ನುಗ್ಗಿದ ಕಳ್ಳರು ಕಪಾಟನ್ನು ಮುರಿದು ಆಭರಣ ಹಾಗೂ ನಗದು ಅಪಹರಿಸಿದ್ದಾರೆ. ಕಪಾಟಿನಲ್ಲಿ  ವಿದೇಶ ಮಿಠಾಯಿಗಳ ಕೆಲವು ಪ್ಯಾಕೆಟ್ ಇತ್ತು. ಇವುಗಳನ್ನು ಕೊಂಡುಹೋಗಲೆಂದು ಕಳ್ಳರು ಒಂದು ಚೀಲದಲ್ಲಿ ತುಂಬಿಸಿಟ್ಟಿದ್ದರು. ಆದರೆ ಅದನ್ನು ಹೊಂಡುಹೋಗಲಿಲ್ಲ. ಮರೆತು ಹೋಗಿರಬಹುದೆಂದು ಶಂಕಿಸಲಾಗಿದೆ. ಕಳ್ಳರು ಹಿಂತಿರುಗಿರುವುದಾಗಿ ಶಂಕಿಸುವ ದಾರಿಯಲ್ಲಿ ಬಿದ್ದ ಸ್ಥಿತಿಯಲ್ಲಿ ೫ ಲಕ್ಷ ರೂ.ನಷ್ಟು ಮೌಲ್ಯದ ಆಭರಣಗಳನ್ನು ಪತ್ತೆಹಚ್ಚಲಾಗಿದೆ. ಕಳವುಗೈದು ಅವಸರವಸರವಾಗಿ ಪರಾರಿಯಾಗುವ ವೇಳೆ ಕಳ್ಳರ ಕೈಯಿಂದ ಬಿದ್ದುಹೋಗಿರಬೇಕೆಂದು ಶಂಕಿಸಲಾಗಿದೆ. ಇದೇ ವೇಳೆ ಕುಖ್ಯಾತ ಕ್ರಿಮಿನಲ್ ಆಗಿರುವ ಓರ್ವನ ನೇತೃತ್ವದಲ್ಲಿ ಈ ಮನೆಯಿಂದ ಕಳವುಗೈದಿರಬೇಕೆಂದು ಶಂಕಿಸಲಾಗುತ್ತಿದೆ. ಈ ವ್ಯಕ್ತಿ ಕಳೆದ ಕೆಲವು ದಿನಗಳಿಂದ ಪೂಚಕ್ಕಾಡ್ ಹಾಗೂ ಪರಿಸರಕ್ಕೆ ತಲುಪಿದ್ದನೆಂದು ತಿಳಿದು ಬಂದಿದೆ. ಅಬ್ದುಲ್ ಮಜೀದ್‌ರ ಮನೆಯಲ್ಲಿ ಯಾರೂ ಇಲ್ಲವೆಂದು ಖಚಿತಪಡಿಸಿದ ಬಳಿಕ ಸೂತ್ರಧಾರನನ್ನು ಕಳುಹಿಸಿದ ತಂಡ ಕಳವು ನಡೆಸಿದೆ ಎಂದು ಶಂಕಿಸಲಾಗುತ್ತಿದೆ. ಈ ಮನೆಯಿಂದ ಕೆಲವು ಬೆರಳಚ್ಚುಗಳು ಲಭಿಸಿದ್ದು, ಇವುಗಳ ತಪಾಸಣೆ ನಡೆಸಲಾಗುತ್ತಿದೆ.

RELATED NEWS

You cannot copy contents of this page