ಕುಂಟಂಗೇರಡ್ಕದ ಯುವತಿ ಮೃತದೇಹ ಮದುವೆ ನಿಶ್ಚಿತಾರ್ಥ ನಡೆದ ಯುವಕನ ಸಮಾಧಿ ಸಮೀಪದಲ್ಲೇ ಅಂತ್ಯಸಂಸ್ಕಾರ

ಕುಂಬಳೆ:  ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾದ ಕಿದೂರು ಕುಂಟಂಗೇರಡ್ಕದ ಯುವತಿಯ ಮೃತದೇಹವನ್ನು ತಮಿಳುನಾಡಿನಲ್ಲಿ ಅಂತ್ಯಸಂಸ್ಕಾರ ನಡೆಸಲಾಯಿತು. ಕಿದೂರು ಕುಂಟಂಗೇರಡ್ಕದ ಬಿ. ಜಯಾನಂದರ ಪುತ್ರಿ ಪ್ರಫುಲ್ಲ (26)ರ ಮೃತದೇಹವನ್ನು ನಿನ್ನೆ ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯ ವಳ್ಳಿಯೂರು ಎಂಬಲ್ಲಿರುವ ಸ್ಮಶಾನದಲ್ಲಿ ಅಂತ್ಯಸಂಸ್ಕಾರ ನಡೆಸಲಾಯಿತು.

ತಮಿಳುನಾಡು ನಿವಾಸಿಯಾದ ಬ್ಯಾಂಕ್ ನೌಕರ ಮಣಿ ಎಂಬವರ ಸಮಾಧಿಯ ಸಮೀಪದಲ್ಲೇ ಪ್ರಫುಲ್ಲರ ಅಂತ್ಯಸಂಸ್ಕಾರ ನಡೆಸಲಾಗಿದೆ.  ಮಣಿ ಹಾಗೂ ಪ್ರಫುಲ್ಲರ ಮದುವೆ ನಿಶ್ಚಿತಾರ್ಥ ನಾಲ್ಕು ತಿಂಗಳ ಹಿಂದೆ ನಡೆಸಲಾಗಿತ್ತು. ಅನಂತರ ಒಂದು ತಿಂಗಳ ಹಿಂದೆ ಸಂಭವಿಸಿದ ಬೈಕ್ ಅಪಘಾತದಲ್ಲಿ ಗಂಭೀರ ಗಾಯಗೊಂಡ ಮಣಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಇದರಿಂದ   ತೀವ್ರವಾಗಿ  ನೊಂದಿದ್ದ ಪ್ರಫುಲ್ಲ ಕಳೆದ ಆದಿತ್ಯವಾರ  ಮನೆಯೊಳಗೆ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.  ಇದೇ ವೇಳೆ ಪ್ರಫುಲ್ಲ ಬರೆದಿಟ್ಟ ಡೆತ್ ನೋಟ್ ಪತ್ತೆಯಾಗಿದ್ದು, ಅದರಲ್ಲಿ  ತನ್ನ ಮೃತದೇಹವನ್ನು ಮಣಿಯ ಸಮಾಧಿಯ ಸಮೀಪದಲ್ಲೇ ಸಂಸ್ಕರಿಸಬೇಕೆಂದು  ತಿಳಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಮಣಿಯ ಸಂಬಂಧಿಕರೊಂದಿಗೆ ಪ್ರಫುಲ್ಲರ ಸಂಬಂಧಿಕರು ಮಾತುಕತೆ ನಡೆಸಿದ್ದರು. ಇದರಂತೆ  ನಿನ್ನೆ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಪ್ರಫುಲ್ಲರ ಮೃತದೇಹವನ್ನು ತಮಿಳುನಾಡಿಗೆ ಕೊಂಡೊಯ್ದು ಮಣಿಯ ಸಮಾಧಿಯ ಸಮೀಪದಲ್ಲೇ ಅಂತ್ಯಸಂಸ್ಕಾರ ನಡೆಸಲಾಯಿತು. ಈ ವೇಳೆ ಪ್ರಫುಲ್ಲರ ತಂದೆ, ಸಹೋದರ ಪ್ರಮೋದ್, ಸಂಬಂಧಿಕ ಲೋಕೇಶ್, ಮಾಜಿ ಪಂಚಾಯತ್ ಸದಸ್ಯ ರವಿರಾಜ್ ಹಾಗೂ ಮಣಿಯ ಸಂಬಂಧಿಕರು ಉಪಸ್ಥಿತರಿದ್ದರು.

RELATED NEWS

You cannot copy contents of this page