ಕಾಸರಗೋಡು: ಮದುವೆ ಮುಹೂರ್ತಕ್ಕೆ ಕೇವಲ ನಿಮಿಷಗಳ ಮೊದಲು ನಾಪತ್ತೆಯಾದ ವರ ಅತ್ಯಾಚಾರ ಪ್ರಕರಣದಲ್ಲಿ ಸೆರೆಗೀಡಾಗಿದ್ದಾನೆ. ಬಳಾಲ್ ಸಮೀಪದ ವಿಷ್ಣುನಾರಾಯಣನ್ (24) ಎಂಬಾತನನ್ನು ವೆಳ್ಳರಿಕುಂಡು ಪೊಲೀಸರು ಬಂಧಿಸಿದ್ದಾರೆ. ಆರೋಪಿಗೆ ನ್ಯಾಯಾಲಯ ಎರಡು ವಾರಗಳ ರಿಮಾಂಡ್ ವಿಧಿಸಿದೆ. ವಿಷ್ಣುನಾರಾಯಣನ್ ಹಾಗೂ ವಧುವಾದ ೨೫ರ ಹರೆಯದ ಯುವತಿ ಈ ಹಿಂದೆ ಪ್ರೇಮದಲ್ಲಿದ್ದರು. ಅನಂತರ ಎರಡೂ ಮನೆಯವರು ಮಾತನಾಡಿ ಕೈಗೊಂಡ ನಿರ್ಧಾರದಂತೆ ಇವರ ಮದುವೆಯನ್ನು ಮೇ 10ರಂದು ಬಳಾಲ್ ಸಮೀಪದ ಕ್ಷೇತ್ರವೊಂದರಲ್ಲಿ ನಡೆಸಲು ತೀರ್ಮಾನಿಸಲಾಗಿತ್ತು. ಮದುವೆಗೆ ಸಿದ್ಧತೆಗಳೆಲ್ಲಾ ಪೂರ್ಣಗೊಂಡು ವಧು ಹಾಗೂ ಸಂಬಂಧಿಕರು ಕ್ಷೇತ್ರಕ್ಕೆ ತಲುಪಿದ್ದರು. ಆದರೆ ಮುಹೂರ್ತ ಸಮಯವಾದರೂ ವರ ಹಾಗೂ ಆತನ ಸಂಬಂಧಿಕರು ತಲುಪಿರಲಿಲ್ಲ. ಇದರಿಂದ ವಧು ಹಾಗೂ ಆಕೆಯ ಸಂಬಂಧಿಕರಲ್ಲಿ ಆತಂಕ ಸೃಷ್ಟಿಯಾಯಿತು. ಈ ಮಧ್ಯೆ ವರನ ಸಹೋದರಿ ಹಾಗೂ ಸಂಬಂಧಿಕರು ಕ್ಷೇತ್ರಕ್ಕೆ ತಲುಪಿ ವರ ನಾಪತ್ತೆಯಾಗಿದ್ದಾ ನೆಂದೂ ವಧುವಿನ ಸಂಬಂಧಿಕರಲ್ಲಿ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಮದು ವೆ ಮೊಟಕುಗೊಂಡು ಅವರೊಲ್ಲರೂ ಮನೆಗಳಿಗೆ ಮರಳಿದ್ದರು. ಅದರ ಬೆನ್ನಲ್ಲೇ ವಿಷ್ಣುನಾರಾಯಣನ್ ತನ್ನ ಮೇಲೆ ಲೈಂಗಿಕ ಕಿರುಕುಳ ನೀಡಿರುವುದಾಗಿ ಆರೋಪಿಸಿ ಪ್ರಸ್ತುತ ವಧುವಾದ ಯುವತಿ ವೆಳ್ಳರಿಕುಂಡ್ ಪೊಲೀಸರಿಗೆ ದೂರು ನೀಡಿದ್ದಾಳೆ. ಇದರಂತೆ ಕೇಸು ದಾಖಲಿಸಿಕೊಂಡ ಪೊಲೀಸರು ವಿಷ್ಣು ನಾರಾಯಣನ್‌ನನ್ನು ಬಂಧಿಸಿದ್ದಾರೆ.






