ತಿರುವನಂತಪುರ: ಯುಡಿಎಫ್ ನೇತೃತ್ವದ ಸಚಿವ ಸಂಪುಟ ಸೋಮವಾರ ಪ್ರಮಾಣವಚನ ಸ್ವೀಕರಿಸಿ ಅಧಿಕಾರಕ್ಕೇರಲಿರು ವಂತೆಯೇ ಸಚಿವ ಸಂಪುಟದಲ್ಲಿ ಒಳಗೊಳ್ಳಲಿರುವ ಸಚಿವರುಗಳ ಹೆಸರು ಕಾಂಗ್ರೆಸ್ ಸೇರಿದಂತೆ ಇತರ ಘಟಕ ಪಕ್ಷಗಳು ಇಂದು ಘೋಷಿಸಲಿವೆ. ಇದಕ್ಕಾಗಿರುವ ಬಿರುಸಿನ ಚರ್ಚೆ ನಿನ್ನೆಯಿಂದಲೇ ಆರಂಭಗೊಂಡಿದೆ. ಅಂತಿಮ ತೀರ್ಮಾನ ಉಂಟಾಗಲಿದೆ. ಸಚಿವ ಸಂಪುಟದ ಪ್ರಮಾಣವಚನ ಸ್ವೀಕಾರ ಸೋಮವಾರ ತಿರುವನಂತಪುರದ ಸೆಂಟ್ರಲ್ ಸ್ಟೇಡಿಯಂನಲ್ಲಿ ನಡೆಯಲಿದೆ. ಅದಕ್ಕಿರುವ ಎಲ್ಲಾ ಸಿದ್ಧತೆಗಳು ಭರದಿಂದ ಸಾಗುತ್ತಿದೆ. ಈ ಸ್ಟೇಡಿಯಂನಲ್ಲಿ 10 ಸಾವಿರ ಮಂದಿಗೆ ಆಸನ ಸೌಕರ್ಯ ಏರ್ಪಡಿಸಲಾಗುತ್ತಿದೆ. ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಸುಮಾರು 1 ಲಕ್ಷದಷ್ಟು ಮಂದಿ ಭಾಗವಹಿಸುವ ನಿರೀಕ್ಷೆಯಿದೆ. ಸಾರ್ವಜನಿಕರಿಗೆ ಪಾಸ್ ಮೂಲಕ ಸ್ಟೇಡಿಯಂಗೆ ಪ್ರವೇಶ ನೀಡಲಾಗುವುದು. ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಮುಖ್ಯಮಂತ್ರಿ ಮತ್ತು ಸಚಿವರುಗಳಿಗಾಗಿ ಲೋಕ್ ಭವನದಲ್ಲಿ ರಾಜ್ಯಪಾಲರು ವಿಶೇಷ ಔತಣಕೂಟವನ್ನೂ ಏರ್ಪಡಿಸಿದ್ದಾರೆ. ಈ ಸತ್ಕಾರಕೂಟದ ಬಳಿಕ ಮೊದಲ ಸಚಿವ ಸಂಪುಟ ಸಭೆ ನಡೆಯಲಿದೆ.
ನೂತನ ಸಚಿವ ಸಂಪುಟ ಪ್ರಮಾಣವಚನ ಸ್ವೀಕರಿಸಿದ ಬೆನ್ನಲ್ಲೇ ಮೇ 21ರಂದು ವಿಧಾನಸಭೆಯಲ್ಲಿ ಶಾಸಕರ ಪ್ರಮಾಣವಚನ ಸ್ವೀಕಾರ ನಡೆಯಲಿದೆ. ೨೨ರಂದು ವಿಧಾನಸಭೆಯ ಹೊಸ ಸ್ಪೀಕರ್‌ರ ಆಯ್ಕೆ ನಡೆಯಲಿದೆ. ನಂತರ ೨೯ ರಂದು ರಾಜ್ಯಪಾಲರ ಭಾಷಣದೊಂದಿಗೆ ಹೊಸ ವಿಧಾನಸಭಾ ಅಧಿವೇಶನ ಆರಂಭಗೊಳ್ಳಲಿದೆ. ಹೊಸದಾಗಿ ಅಧಿಕಾರಕ್ಕೇರಲಿರುವ ಯುಡಿಎಫ್ ಸರಕಾರದ ಮೊದಲ ಬಜೆಟ್ ಜೂನ್ ೫ರಂದು ವಿಧಾನಸಭೆಯಲ್ಲಿ ಮಂಡಿಸಲಾಗುವುದು.







