ಬದಿಯಡ್ಕ: ಬ್ಯಾಂಕ್‌ನ ಕಾವಲುಗಾರನಾದ ಯುವಕನನ್ನು ಇರಿದು ಕೊಲೆಗೈದ ಘಟನೆ ಮಾರ್ಪನಡ್ಕದಲ್ಲಿ ನಡೆದಿದೆ.
ಕುಂಬ್ಡಾಜೆ ಸೇವಾ ಸಹಕಾರಿ ಬ್ಯಾಂಕ್‌ನ ಸೆಕ್ಯುರಿಟಿ ನೌಕರನೂ, ಮಾರ್ಪನಡ್ಕ ಬೆದ್ರಂಕೂಡ್ಲು ನಿವಾಸಿ ಸುರೇಶ್ (42) ಕೊಲೆಗೀಡಾದ ವ್ಯಕ್ತಿಯಾಗಿದ್ದಾರೆ. ನಿನ್ನೆ ರಾತ್ರಿ 9.25ರ ವೇಳೆ ಕುಂಬ್ಡಾಜೆ ಸೇವಾ ಸಹಕಾರಿ ಬ್ಯಾಂಕ್‌ನ ಸಮೀಪ ಈ ಕೊಲೆಕೃತ್ಯ ನಡೆದಿದೆ. ಘಟನೆಗೆ ಸಂಬಂಧಿಸಿ ಮಾರ್ಪನಡ್ಕದ ಕಿರಣ್, ಅಖಿಲೇಶ್ ಎಂಬಿವರ ವಿರುದ್ಧ ಬದಿಯಡ್ಕ ಪೊಲೀಸರು ಕೇಸು ದಾಖಲಿಸಿಕೊಂ ಡಿದ್ದಾರೆ. ನಿನ್ನೆ ಸಂಜೆ ಕುಂಬ್ಡಾಜೆ ಪಂಚಾಯತ್ ಮೈದಾನದಲ್ಲಿ ನಡೆದ ಕ್ರಿಕೆಟ್ ಪಂದ್ಯಾಟ ವೇಳೆ ಉಂಟಾದ ವಾಗ್ವಾದವೇ ಕೊಲೆಕೃತ್ಯದಲ್ಲಿ ಕೊನೆಗೊಂಡಿದೆಯೆಂದು ಬದಿಯಡ್ಕ ಪೊಲೀಸರು ದಾಖಲಿಸಿಕೊಂಡ ಪ್ರಕರಣದಲ್ಲಿ ತಿಳಿಸಲಾಗಿದೆ.
ಮೈದಾನದಲ್ಲಿ ನಡೆದ ವಾಗ್ವಾದದ ಮುಂದುವರಿಕೆಯಾಗಿ ಬ್ಯಾಂಕ್ ಪರಿಸರಕ್ಕೆ ತಲುಪಿದ ಆರೋಪಿಗಳು ಸುರೇಶ್‌ರಿಗೆ ಇರಿದಿದ್ದರು. ಇದರಿಂದ ಗಂಭೀರ ಗಾಯಗೊಂಡ ಸುರೇಶ್‌ರನ್ನು ಕೂಡಲೇ ಆಸತ್ರೆಗೆ ತಲುಪಿಸಿದರೂ ಜೀವರಕ್ಷಿಸಲಾಗಲಿಲ್ಲ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಾಸರಗೋಡು ಜನರಲ್ ಆಸ್ಪತ್ರೆಗೆ ತಲುಪಿಸಲಾಗಿದೆ. ದಿ| ಕೊರಗ ಎಂಬವರ ಪುತ್ರನಾದ ಮೃತರು ತಾಯಿ ದೇವಕಿ,ಪತ್ನಿ ಉಷಾ, ಮಕ್ಕಳಾದ ಸುಶಾಂತ್, ಸುಭಾಶ್, ಸುಧೀಶ್, ಸಹೋದರರಾದ ಜನಾರ್ದನ, ವಿಶ್ವನಾಥ, ನರೇಂದ್ರ ಹಾಗೂ ಅಪಾರ ಬಂಧ-ಮಿತ್ರರನ್ನು ಅಗಲಿದ್ದಾರೆ.






