ಮಾರ್ಪನಡ್ಕದಲ್ಲಿ ಬ್ಯಾಂಕ್ ಸೆಕ್ಯೂರಿಟಿ ನೌಕರನನ್ನು ಇರಿದು ಕೊಲೆಗೈದ ಇಬ್ಬರು ಆರೋಪಿಗಳ ಬಂಧನ: ಕೊಲೆಗೆ ಬಳಸಿದ ಚಾಕು ಪತ್ತೆಗಾಗಿ ಪೊಲೀಸರು ಪುತ್ತೂರಿಗೆ

ಬದಿಯಡ್ಕ: ಕುಂಬ್ಡಾಜೆ ಸೇವಾ ಸಹಕಾರಿ ಬ್ಯಾಂಕ್‌ನ ಸೆಕ್ಯೂರಿಟಿ ನೌಕರನೂ, ಮಾರ್ಪನಡ್ಕ ಬೆದ್ರಕೂಡ್ಲು ನಿವಾಸಿಯಾದ ಸುರೇಶ್ (42) ಎಂಬವರನ್ನು ಇರಿದು ಕೊಲೆಗೈದ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು 24 ಗಂಟೆಯೊಳಗೆ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಕುಂಬ್ಡಾಜೆ ಮೈಲ್ತೊಟ್ಟಿಯ ಕಿರಣ್ (30), ಕರುವತ್ತಡ್ಕದ ಅಖಿಲೇಶ್ (25) ಎಂಬಿವರನ್ನು  ಕಾಸರಗೋಡು ಎಎಸ್‌ಪಿ ಅಚ್ಯುತ್ ಅಶೋಕ್, ಬದಿಯಡ್ಕ ಪೊಲೀಸ್ ಇನ್‌ಸ್ಪೆಕ್ಟರ್ ಅನೂಪ್‌ಕೃಷ್ಣನ್ ಎಂಬಿವರ ನೇತೃತ್ವದಲ್ಲಿ  ಸೆರೆಹಿಡಿಯಲಾಗಿದೆ.  ಕೊಲೆ ಕೃತ್ಯದಬಳಿಕ  ಆರೋಪಿಗಳು ಕರ್ನಾಟಕಕ್ಕೆ ಪರಾರಿಯಾದ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿತ್ತು. ಇದರಿಂದ ಕೂಡಲೇ ಪೊಲೀಸರು ಕಾರ್ಯಾಚರಣೆ ನಡೆಸಿ ಪುತ್ತೂರಿನಿಂದ ಆರೋಪಿಗಳನ್ನು ಬಂಧಿಸಿದ್ದಾರೆ.

ಕಾರ್ಯಾಚರಣೆ ನಡೆಸಿದ ಪೊಲೀಸ್ ತಂಡದಲ್ಲಿ ಎಸ್‌ಐಗಳಾದ ರೂಪೇಶ್, ಸುಕುಮಾರನ್, ಪ್ರಸಾದ್, ಸಜೀವನ್, ಸಿವಿಲ್ ಪೊಲೀಸ್ ಆಫೀಸರ್‌ಗಳಾದ ಗೋಕುಲ್, ಅನೀಶ್, ವರ್ಗೀಸ್, ಶ್ರೀನೇಶ್ ಎಂಬಿವರಿದ್ದರು.  ಆರೋಪಿಗಳನ್ನು ಬದಿಯಡ್ಕ ಪೊಲೀಸ್ ಠಾಣೆಗೆ ತಲುಪಿಸಿ ತನಿಖೆಗೊಳಪಡಿಸಲಾಗಿದೆ. ಇದೇ ವೇಳೆ ಸುರೇಶ್‌ಗೆ ಇರಿಯಲು ಬಳಸಿದ ಚಾಕುವನ್ನು ಪುತ್ತೂರಿನಲ್ಲಿ ಉಪೇಕ್ಷಿಸಿರುವುದಾಗಿ ಆರೋಪಿಗಳು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಚಾಕುವನ್ನು  ಪತ್ತೆಹಚ್ಚಿ ವಶಕ್ಕೆ ತೆಗೆಯಲು ಆರೋಪಿಗಳ ಸಹಿತ ಪೊಲೀಸರು ಇಂದು ಬೆಳಿಗ್ಗೆ ಪುತ್ತೂರಿಗೆ ತೆರಳಿದ್ದಾರೆ.

ಮೊನ್ನೆ ರಾತ್ರಿ ೯.೨೫ರ ವೇಳೆ ಕುಂಬ್ಡಾಜೆ ಸೇವಾ ಸಹಕಾರಿ ಬ್ಯಾಂಕ್ ಸಮೀಪ ಆರೋಪಿಗಳು ಸುರೇಶ್‌ಗೆ ಇರಿದಿದ್ದರು.  ಮೊನ್ನೆ ಸಂಜೆ ಕುಂಬ್ಡಾಜೆ ಪಂಚಾಯತ್ ಮೈದಾನದಲ್ಲಿ ನಡೆದ ಕ್ರಿಕೆಟ್ ಪಂದ್ಯಾಟದ ಮಧ್ಯೆ ಉಂಟಾದ ವಾಗ್ವಾದವೇ ಕೊಲೆ ಕೃತ್ಯದಲ್ಲಿ ಕೊನೆಗೊಂಡಿದೆಯೆಂದು ಬದಿಯಡ್ಕ ಪೊಲೀಸರು ದಾಖಲಿಸಿಕೊಂಡ  ಪ್ರಕರಣದಲ್ಲಿ ತಿಳಿಸಲಾಗಿದೆ. ಮೈದಾನದಲ್ಲಿ ನಡೆದ ವಾಗ್ವಾದದ ಮುಂದುವರಿಕೆಯಾಗಿ ಬ್ಯಾಂಕ್ ಪರಿಸರಕ್ಕೆ ತಲುಪಿದ ಆರೋಪಿಗಳು ಸುರೇಶ್ ಗೆ ಇರಿದಿದ್ದರು.ಇದರಿಂದ ಗಂಭೀರ ಗಾಯಗೊಂಡ ಸುರೇಶ್‌ರನ್ನು ಕೂಡಲೇ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ.

RELATED NEWS

You cannot copy contents of this page