ಕಾಸರಗೋಡು: ನೆಲ್ಲಿಕುಂಜೆ- ಬಂಗರಗುಡ್ಡೆ- ಕಡಪ್ಪುರ ಈ ಭಾಗ ದಲ್ಲಿ ಹರಿದುಹೋಗುವ ಕಲ್ಮಾಡಿ ತೋಡು ಈಗ ದುರ್ವಾಸನೆ ಕೇಂದ್ರವಾಗಿದೆ. ಬಂಗರಗುಡ್ಡೆ ಹಾಗೂ ಕಡಪ್ಪುರವನ್ನು ಜೋಡಿಸುವ ಅಣೆಕಟ್ಟಿನಿಂದ ಪಳ್ಳಂ ಭಾಗಕ್ಕಿರುವ ಸೇತುವೆವರೆಗಿನ ಈಸ್ಥಳದಲ್ಲಿ ದುರ್ಗಂ ಧದಿಂದ ಪರಿಸರ ನಿವಾಸಿಗಳು ಸಂಕಷ್ಟ ಅನುಭವಿಸುತ್ತಿದ್ದಾರೆ.
ಕಪ್ಪಗಿನ ನೀರು ತೋಡಿನಲ್ಲಿ ಕಟ್ಟಿ ನಿಂತಿದ್ದು, ಈ ಪರಿಸರದ ಬಾವಿ ಹಾಗೂ ಕೊಳವೆ ಬಾವಿಗಳಿಗೆ ಒರತೆಯಾಗಿ ಈ ಮಲಿನಜಲ ಸೇರಲು ಸಾಧ್ಯವಿದೆ. ಕುಡಿಯಲು ಅಥವಾ ಸ್ನಾನ ಮಾಡಲು, ಬಟ್ಟೆ ತೊಳೆಯಲು ಕೂಡಾ ಉಪಯೋ ಗಿಸಲಾಗದಷ್ಟು ತೋಡಿನ ನೀರು ಕಲುಶಿತಗೊಂಡಿದೆ. ಅಲ್ಲದೆ ದುರ್ಗಂಧದಿಂದ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆಯೂ ಕೂಡಾ ಪರಿಸರದವರ ಭೀತಿಯನ್ನು ಹೆಚ್ಚಿಸಿದೆ. ಪಳ್ಳಂ ಸೇತುವೆಯಡಿಯಲ್ಲಿ ಕಾಂಕ್ರೀಟ್ ಸ್ಲ್ಯಾಬ್ ಒಂದಿದೆ. ಅದು ನೀರು ಹರಿದು ಹೋಗುವುದಕ್ಕೆ ತಡೆಯಾಗಿದೆ. ಅದನ್ನು ತೆರವುಗೊಳಿಸಿದರೆ. ನೀರು ಶುದ್ಧವಾಗಬಹುದೆಂದು ಸ್ಥಳೀಯರು ನುಡಿಯುತ್ತಾರೆ. ಪಳ್ಳಂನಲ್ಲಿ ಹೊಸ ಸೇತುವೆ ನಿರ್ಮಿಸಿದಾಗ ಹಳೆಯ ಸೇತುವೆಯ ಕಾಂಕ್ರೀಟ್ ಅವಶಿಷ್ಟಗಳನ್ನು ತೆರವುಗೊಳಿಸದಿರುವುದೇ ಕಲ್ಮಾಡಿ ತೋಡಿನಲ್ಲಿ ನೀರು ಕಟ್ಟಿ ನಿಲ್ಲಲು ಹಾಗೂ ಅದು ದುರ್ವಾಸನೆ ಬೀರಲು ಕಾರಣವೆನ್ನಲಾಗಿದೆ.
ಇದಲ್ಲದೆ ಕಾಸರಗೋಡಿನ ಖಾಸಗಿ ಆಸ್ಪತ್ರೆಗಳ ತ್ಯಾಜ್ಯವನ್ನು ಈ ತೋಡಿಗೆ ಎಸೆಯಲಾಗುತ್ತಿದೆ. ಈ ಬಗ್ಗೆ ಅಧಿಕಾರಿಗಳಿಗೆ ದೂರು ನೀಡಿ ಗಮನ ಸೆಳೆಯಲಾಗಿದ್ದರೂ ಅವರ ಭಾಗದಿಂದ ಯಾವುದೇ ಕ್ರಮ ಉಂಟಾಗಿಲ್ಲವೆಂದು ಸ್ಥಳೀಯರು ದೂರಿದ್ದಾರೆ. ನೆಲ್ಲಿಕುಂಜೆ ಕಡಪ್ಪುರ ಸೇತುವೆಯಡಿಯಲ್ಲಿ ಗುಜರಿ ಸಾಮಗ್ರಿಗಳು ರಾಶಿ ಹಾಕಲಾಗಿದ್ದು, ಇದು ಗಾಳಿ ಹಾಗೂ ಮಳೆಗೆ ಈ ತೋಡಿಗೆ ಸೇರಿ ನೀರು ಹರಿಯುವಿಕೆಗೆ ತಡೆಯಾಗುತ್ತಿದೆ. ಸೊಳ್ಳೆಗಳು ಕೂಡಾ ಈ ಪರಿಸರದಲ್ಲಿ ಜನಸಾಮಾನ್ಯರ ಬದುಕಿಗೆ ಸಮಸ್ಯೆ ಉಂಟು ಮಾಡುತ್ತಿದೆ. ಇವೆಲ್ಲವುಗಳಿಗೆ ಪರಿಹಾರ ಕಾಣಬೇಕಾಗಿರುವುದು ಅತ್ಯಗತ್ಯವಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.





