ಗಂಟಲಲ್ಲಿ ಎದೆಹಾಲು ಸಿಲುಕಿದ ಶಂಕೆ: ಮೂರು ತಿಂಗಳ ಮಗು ಸಾವು

ಕಾಸರಗೋಡು: ಗಂಟಲಲ್ಲಿ ಎದೆಹಾಲು ಸಿಲುಕಿರುವುದಾಗಿ ಶಂಕಿಸಲಾಗುತ್ತಿರುವ ಮೂರು ತಿಂಗಳ ಗಂಡು ಮಗು ಸಾವನ್ನಪ್ಪಿದ ಘಟನೆ ನಡೆದಿದೆ.  ನಗರದ ನೆಲ್ಲಿಕುಂಜೆ ಕಸಬಾ ತಾಯಲ್ ಹೌಸ್‌ನ  ಶಾಜಹಾನ್-ಆಯಿಷಾ ದಂಪತಿ ಪುತ್ರ ತ್ವಾಹಾ ಅಬ್ದುಲ್ಲ ಸಾವನ್ನಪ್ಪಿದ ಮಗು. ಈ ಮಗುವಿಗೆ ನಿನ್ನೆ ರಾತ್ರಿ ತಾಯಿ ಎದೆಹಾಲು ಉಣಿಸಿ ತೊಟ್ಟಿಲಲ್ಲಿ ಮಲಗಿಸಿದ್ದರೆನ್ನಲಾಗಿದೆ. ಇಂದು ಬೆಳಿಗ್ಗೆ 6 ಗಂಟೆ ವೇಳೆ ಮಗು  ಚಲನರಹಿತವಾಗಿರುವುದನ್ನು ಗಮನಿಸಿದ ಮನೆಯವರು ಮಗುವನ್ನು ತಕ್ಷಣ ನಗರದ ಖಾಸಗಿ ಆಸ್ಪತ್ರೆಗೆ ಸಾಗಿಸಿದ್ದರು.  ವೈದ್ಯರು ಮಗುವಿನ ಆರೋಗ್ಯ ತಪಾಸಣೆ ನಡೆಸಿದಾಗ ಮಗು ಮೃತಪಟ್ಟಿರುವುದನ್ನು ದೃಢಪಡಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಮೃತದೇಹವನ್ನು ಜನರಲ್ ಆಸ್ಪತ್ರೆಗೆ ಸಾಗಿಸ ಲಾಯಿತು. ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿ ಲಭಿಸಿದ ಬಳಿಕ ಮಗುವಿನ ಸಾವಿನ ನಿಖರ ಮಾಹಿತಿ ಲಭಿಸಲು ಸಾಧ್ಯ ವೆಂದು ಪೊಲೀಸರು ತಿಳಿಸಿದ್ದಾರೆ. ಸಾವನ್ನಪ್ಪಿದ್ದು  ಈದಂಪತಿಯ ಮೂರನೇ ಮಗುವಾಗಿದೆ.

You cannot copy contents of this page