ಕಾಸರಗೋಡು: ಕೇರಳ- ಕರ್ನಾಟಕ ಪೊಲೀಸರಿಗೆ ಬೇಕಾಗಿದ್ದ ಮಾತ್ರವಲ್ಲ ತಮಿಳುನಾಡು ಕೊಯಂಬತ್ತೂರು ಮೇಟು ಪಾಳಯಂ ನಿವಾಸಿಯಾದ ರಾಜನ್ ಅಲಿಯಾಸ್ ಅಣ್ಣಾಚಿ ರಾಜನ್ ವಿವಿಧ ರಾಜ್ಯಗಳಲ್ಲಾಗಿ ೩೦ಕ್ಕೂ ಅಧಿಕ ಕಳವು ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆ. ಈತ ಜೈಲಿನಿಂದ ಹೊರಗೆ ಬಂದರೆ ಎಲ್ಲಾದರೂ ಖಂಡಿತವಾಗಿ ಕಳವು ನಡೆಸುವನು ಎಂಬ ವಿಷಯದಲ್ಲಿ ಪೊಲೀಸರಿಗೆ ಸಂಶಯವಿಲ್ಲ. ಯಾವುದೇ ಸಂದರ್ಭದಲ್ಲಿ ಮೊಬೈಲ್ ಫೋನ್ ಉಪಯೋಗಿಸದ ವ್ಯಕ್ತಿಯಾಗಿದ್ದಾನೆ ರಾಜನ್. ಆದುದರಿಂದ ಸೈಬರ್ ಸೆಲ್ನ ಸಹಾಯದೊಂದಿಗೆ ಈತನನ್ನು ಪತ್ತೆಹಚ್ಚಲು ಕಷ್ಟ.
ಕಳವು ನಡೆಸಲು ಈತನಿಗೆ ಹೆಚ್ಚಿನ ಆಯುಧಗಳು ಅಗತ್ಯವಿಲ್ಲ. ಕೇವಲ ಒಂದು ಪಿಕ್ಕಾಸ್ ಲಭಿಸಿದರೆ ಯಾವುದೇ ಬಾಗಿಲನ್ನೂ ಈತ ತೆರೆದು ಕಳವು ನಡೆಸುತ್ತಾನೆ. ಬಾಗಿಲಿನ ಬೀಗ ಮುರಿಯುವ ಬದಲಾಗಿ ಈತ ಬಾಗಿಲನ್ನೇ ಮುರಿದು ಒಳನುಗ್ಗಿ ಕಳವು ನಡೆಸುವುದು ಈತನ ರೀತಿ. ಬಾಗಿಲು ಹಾಗೂ ಕಪಾಟು ಮುರಿಯುವಾಗ ಶಬ್ದ ಉಂಟಾಗದಂತೆ ಮುರಿಯುವ ವಿದ್ಯೆ ಈತ ಕರಗತ ಮಾಡಿಕೊಂಡಿದ್ದಾನೆ. ಕಳವುಗೈದ ಬಳಿಕ ದೂರ ಪ್ರಯಾಣ ಮಾಡಿ ಶ್ರೀಮಂತ ಜೀವನ ನಡೆಸುವುದು ಈತನ ಹವ್ಯಾಸವಾಗಿದೆ. ಬೇಕಲ ಪೊಲೀಸ್ ಠಾಣೆ ವ್ಯಾಪ್ತಿಯ ಪೂಚಕ್ಕಾಡ್, ಅರಯಾಲ್ತರದ ಅಬ್ದುಲ್ ಮಜೀದ್ರ ಮನೆಯಲ್ಲಿ ಈ ತಿಂಗಳ ೯ರಂದು ೪೫ ಪವನ್ ಚಿನ್ನ, 50,000 ರೂ. ಕಳವು ನಡೆದಿತ್ತು. ಪ್ರಸ್ತುತ ಪ್ರಕರಣದ ತನಿಖೆ ಆರಂಭಿಸಿದಾಗ ಕಳವು ನಡೆಸಿರುವುದು ರಾಜನಾಗಿರಬೇಕೆಂದು ಪೊಲೀಸರು ಶಂಕಿಸಿದ್ದು, ಬೇಕಲ ಡಿವೈಎಸ್ಪಿ ಎಂ.ಪಿ. ಆಜಾದ್ರ ನೇತೃತ್ವದಲ್ಲಿರುವ ಪ್ರತ್ಯೇಕ ತನಿಖಾ ತಂಡ ತನಿಖೆ ನಡೆಸುತ್ತಿದೆ.
ಅಬ್ದುಲ್ ಮಜೀದ್ರ ಮನೆಯಲ್ಲಿ ಕಳವು ನಡೆದ ದಿನದಂದೇ ಸಮೀಪದ ಇನ್ನೊಂದು ಮನೆಯಲ್ಲೂ ಕಳವಿಗೆತ್ನ ನಡೆಸಲಾಗಿತ್ತು. ಮನೆಯ ಸಮೀಪದ ಸ್ಥಳದಲ್ಲಿ ಕೆಸರಲ್ಲಿ ಹೂತುಹೋದ ರೀತಿಯಲ್ಲಿ ಚಪ್ಪಲಿಯೊಂದು ಲಭಿಸಿದ್ದು, ಇದು ಕಳವಿನ ಹಿಂದೆ ರಾಜನ್ ಆಗಿರಬೇಕೆಂಬ ಶಂಕೆಯನ್ನು ಬಲಪಡಿಸಿದೆ.
ಶೊರ್ನೂರಿನಲ್ಲಿ ನಡೆದ ಇನ್ನೊಂದು ಕಳವು ಕೇಸಿನಲ್ಲಿ ಸೆರೆಯಾದಾಗ ಪೂಚಕ್ಕಾಡ್ ಕಳವು ಬಗ್ಗೆ ಸುಳಿವು ಲಭಿಸಿದೆ. ನ್ಯಾಯಾಂಗ ಬಂಧನದಲ್ಲಿರುವ ಆರೋಪಿಯನ್ನು ಕಸ್ಟಡಿಗೆ ತೆಗೆದ ಬಳಿಕ ಸಮಗ್ರ ತನಿಖೆಗಾಗಿ ಪೂಚಕ್ಕಾಡ್ಗೆ ಕರೆತರುವ ಬಗ್ಗೆ ಪೊಲೀಸರು ಯತ್ನ ಆರಂಭಿಸಿದ್ದಾರೆ.





