ಮುಳ್ಳೇರಿಯ: ಮುಳ್ಳೇರಿಯಾಕ್ಕೆ ಸಮೀಪದ ಆಲಂತಡ್ಕದ ಜನರಲ್ಲಿ ಆವರಿಸಿರುವ ಚಿರತೆ ಭೀತಿ ಶಮನಗೊಳ್ಳದೆ ಇನ್ನೂ ಅದೇ ರೀತಿ ಮುಂದುವರಿಯುತ್ತಿದೆ. ಆಲಂತಡ್ಕದ ದಾಮೋದರನ್ ನಾಯರ್ ಎಂಬವರ ಮನೆಯ ನಾಯಿಯನ್ನು ದಿನಗಳ ಹಿಂದೆ ಚಿರತೆ ಕೊಂದು ಅದರ ಅರ್ಧ ಮಾಂಸವನ್ನು ತಿಂದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.ಈ ಪ್ರದೇಶದಲ್ಲಿ ನೂರಾರು ಮನೆಗಳಿದ್ದು, ಕಳೆದ ಒಂದು ವಾರದಲ್ಲಿ ಹಲವು ಮನೆಗಳ ಸಾಕುನಾಯಿಗಳನ್ನು ಚಿರತೆ ಹಿಡಿದು ಸಾಗಿಸಿದೆ. ಅರಣ್ಯ ಇಲಾಖೆ ಈ ಪರಿಸರದಲ್ಲಿ ಸ್ಥಾಪಿಸಿದ್ದ ಕ್ಯಾಮರಾಗಳಲ್ಲಿ ಚಿರತೆಯ ದೃಶ್ಯವೂ ಗೋಚರಿಸಿದೆ. ಇದು ಈ ಇಡೀ ಪ್ರದೇಶದವರಲ್ಲಿ ತೀವ್ರ ಭೀತಿ ಆವರಿಸುವಂತೆ ಮಾಡಿದೆ. ಆ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯವರು ಆಲಂತಡ್ಕ ಸ್ಥಳೀಯರ ಸಭೆ ಕರೆದು ಚಿರತೆ ಭೀತಿ ನಿವಾರಿಸುವ ಹಾಗೂ ಆ ಬಗ್ಗೆ ಜನರು ಅನುಸರಿಸಬೇ ಕಾಗಿರುವ ಮುಂಜಾಗ್ರತೆ ಬಗ್ಗೆ ಮಾಹಿತಿ ನೀಡಿದರು. ಇದರಂತೆ ಈ ಪ್ರದೇಶದಲ್ಲಿ ಅರಣ್ಯ ಪಾಲಕರ ಗಸ್ತು ಏರ್ಪಡಿಸುವ ತೀರ್ಮಾನ ಕೈಗೊಳ್ಳಲಾಗಿದೆ. ಮಾತ್ರವಲ್ಲ ಕ್ಯಾಮರಾಗಳಲ್ಲಿ ಪತ್ತೆಯಾದ ಚಿರತೆಯ ದೃಶ್ಯಗಳ ಆಧಾರದಲ್ಲಿ ಸಾಗಿ ಬಂದ ದಾರಿಯನ್ನು ಗುರುತಿಸಿ ಅಲ್ಲಿ ಕುಣಿಕೆ ಗೂಡುಗಳನ್ನು ಸ್ಥಾಪಿಸುವ ತೀರ್ಮಾನವನ್ನೂ ಅರಣ್ಯ ಇಲಾಖೆ ಕೈಗೊಂಡಿದೆ.
ಚಿರತೆ ಕಾಟದ ಹಿನ್ನೆಲೆಯಲ್ಲಿ ಈ ಪ್ರದೇಶದ ಜನರು ಅದರಲ್ಲೂ ವಿಶೇಷವಾಗಿ ಮಕ್ಕಳು ಸಂಜೆ ಬಳಿಕ ಸಂಚಾರವನ್ನು ಹೊರತುಪಡಿಸಬೇಕು. ಮಾತ್ರವಲ್ಲ ಸಾಕುಪ್ರಾಣಿಗಳನ್ನು ಸುರಕ್ಷಿತವಾಗಿ ಕಟ್ಟಿ ಹಾಕುವ ಸಲಹೆಯನ್ನು ಅರಣ್ಯ ಅಧಿಕಾರಿಗಳು ನೀಡಿದ್ದಾರೆ. ಕಾರಡ್ಕ ಪಂಚಾಯತ್ ಅಧ್ಯಕ್ಷೆ ಎಂ. ಜನನಿ, ಪಂ. ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ವಸಂತಿ, ಎ ಸವಿತ ಕುಮಾರಿ, ವಿಜಯ್ ಕುಮಾರ್, ಅರಣ್ಯ ಇಲಾಖೆಯ ರೇಂಜ್ ಅಧಿಕಾರಿ ಸಿ.ವಿ. ವಿನೋದ್ ಕುಮಾರ್, ಉಪ ರೇಂಜ್ ಅಧಿಕಾರಿ ಎನ್.ವಿ. ಸತ್ಯನ್, ಸೆಕ್ಷನ್ ಅರಣ್ಯಾಧಿಕಾರಿ ಕೆ.ಎ ಬಾಬು ಮೊದಲಾದವರು ಸಭೆಯಲ್ಲಿ ಮಾತನಾಡಿದರು.






