ಉಪ್ಪಳ: ಎಂಡಿಎಂಎ ಸಹಿತ ಓರ್ವ ಯುವಕನನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ. ಉಪ್ಪಳ ರೈಲ್ವೇ ನಿಲ್ದಾಣ ರಸ್ತೆ ಬಳಿಯ ಬಿಸ್ಮಿಲ್ಲಾ ಮಂಜಿಲ್ನ ಮೊಹಮ್ಮದ್ ಸಮೀರ್ ಪಿ.ಎ (30) ಎಂಬಾತ ಬಂಧಿತ ವ್ಯಕ್ತಿಯಾಗಿದ್ದಾನೆ. ಈತನ ಕೈಯಿಂದ 5.080 ಗ್ರಾಂ ಎಂಡಿಎಂಎ ಹಾಗೂ 55,860 ರೂಪಾಯಿಗಳನ್ನು ವಶಪಡಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ನಿನ್ನೆ ರಾತ್ರಿ 7.10ರ ವೇಳೆ ಎಸ್.ಐ ವೈಷ್ಣವ್ ನೇತೃತ್ವದ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಎಂಡಿಎಂಎ ಸಹಿತ ಯುವಕನನ್ನು ಬಂಧಿಸಲಾಗಿದೆ. ಮಾದಕವಸ್ತು ಸಾಗಾಟ ಬಗ್ಗೆ ಗುಪ್ತ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಬಪ್ಪಾಯಿತೊಟ್ಟಿಯಲ್ಲಿದ್ದ ಮೊಹಮ್ಮದ್ ಸಮೀರ್ನನ್ನು ತಪಾಸಣೆ ನಡೆಸಿದಾಗ ಮಾದಕವಸ್ತು ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ವಿರುದ್ಧ ಕಾಸರಗೋಡು ನಗರಠಾಣೆ ಹಾಗೂ ವಿದ್ಯಾನಗರ ಠಾಣೆಯಲ್ಲಿ ಎಂಡಿಎಂಎ ಪ್ರಕರಣವಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಆರೋಪಿಯನ್ನು ಇಂದು ನ್ಯಾಯಾಲಯದಲ್ಲಿ ಹಾಜರುಪಡಿಸಲಾಗುವುದು.







