ಕುಂಬಳೆ: ಅನಂತಪುರ ಶ್ರೀ ಅನಂತಪದ್ಮನಾಭ ಸ್ವಾಮಿ ದೇವಸ್ಥಾನದ ಪರಿಸರ ಸಹಿತ ಸಮೀಪದ ಸುಮಾರು 3 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಕಾರ್ಯಾಚರಿಸುವ ಕಾರ್ಖಾನೆಗಳಿಂದ ವ್ಯಾಪಕ ಸಮಸ್ಯೆ ಎದುರಾಗಿದ್ದು, ಈ ಹಿನ್ನೆಲೆಯಲ್ಲಿ ಈ ಬಗ್ಗೆ ಸಮಾಲೋಚನೆ ನಡೆಸಲು ಮೇ 31ರಂದು ಅಪರಾಹ್ನ 3 ಗಂಟೆಗೆ ಶ್ರೀ ಅನಂತಪದ್ಮನಾಭ ಸ್ವಾಮಿ ದೇವಸ್ಥಾನ ಪರಿಸರದಲ್ಲಿ ಸಭೆ ನಡೆಸಲು ಅನಂತಪುರ ರಕ್ಷಾಸಮಿತಿ ತೀರ್ಮಾನಿಸಿದೆ.
ಕಾರ್ಖಾನೆಗಳಿಂದ ಹೊರ ಸೂಸುವ ದುರ್ನಾತದಿಂದ ಅನಂತಪುರ ಕ್ಷೇತ್ರದ ಪಾವಿತ್ರ್ಯತೆಗೂ ಧಕ್ಕೆಯಾಗುತ್ತಿದೆ. ಸಮೀಪದ ಜಲಮೂಲಗಳು ಕಲುಷಿತಗೊಂಡಿವೆ. ಮಾತ್ರವಲ್ಲ ಮುಂದಿನ ದಿನಗಳಲ್ಲಿ ಶ್ರೀ ಕ್ಷೇತ್ರದ ಸರೋವರಕ್ಕೂ ಇದರ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ. ಈ ಕಾರ್ಖಾನೆಯ ದುರ್ನಾತದಿಂದಾಗಿ ದೇವಸ್ಥಾನಕ್ಕೆ ಬರುವ ಭಕ್ತರ ಸಹಿತ ಪರಿಸರ ನಿವಾಸಿಗಳು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ಅದನ್ನು ಪರಿಹರಿಸಲು ಸರಕಾರದ ವಿವಿಧ ಅಧಿಕಾರಿಗಳಿಗೆ ನಾಗರಿದರು ದೂರು ನೀಡಿದರೂ, ಪ್ರತಿಭಟನೆ ನಡೆಸಿದರೂ ಪ್ರಯೋಜನವಾಗಲಿಲ್ಲ. ಕಾರ್ಖಾನೆಗಳು ವ್ಯಾಪಕವಾಗಿ ಕಾರ್ಯಾಚರಿಸುತ್ತಿದ್ದು, ಇದರಿಂದ ಮುಂದಿನ ದಿನಗಳಲ್ಲಿ ಈ ಪರಿಸರದ ಜನರಿಗೆ ತೀವ್ರ ಸಮಸ್ಯೆ ಸೃಷ್ಟಿಯಾಗಲಿರುವುದನ್ನು ಮನಗಂಡು ಈ ಕಾರ್ಖಾನೆಗಳ ಚಟುವಟಿಕೆಗಳನ್ನು ನಿಲುಗಡೆಗೊಳಿಸಬೇಕೆಂದು ಅಧಿಕಾರಿಗಳನ್ನು ಒತ್ತಾಯಿಸುವ ಕುರಿತು ಸಭೆ ನಡೆಸಲು ತೀರ್ಮಾನಿಸಲಾಗಿದೆ. ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಬೇಕಾಗಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.






