ಕೇರಳದಲ್ಲಿ ಮುಂಗಾರು ಮಳೆ ಪ್ರವೇಶ ವಿಳಂಬ: ಜೂನ್ 11ರ ನಂತರವೇ ಮಳೆ ಚುರುಕು

ತಿರುವನಂತಪುರ: ಕೇರಳಕ್ಕೆ ಮುಂಗಾರು ಮಳೆ ಮೇ 25ರಂದು ಪ್ರವೇಶಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಈ ಹಿಂದೆ ಮುನ್ಸೂಚನೆ ನೀಡಿದ್ದರೂ ಅದರ ಇತ್ತೀಚೆಗಿನ ವಿಸ್ತೃತ ಶ್ರೇಣಿಯ ಮುನ್ಸೂಚನೆಯಲ್ಲಿ ಮೇ 28ರಿಂದ ಜೂನ್ 4ರವರೆಗೆ ಕೇರಳದಲ್ಲಿ ಬಹುತೇಕ ಒಣಹವೆಯೇ ಇರಲಿದೆ ಎಂದು ತೋರಿಸಿದೆ. ಜೂನ್ 4ರಿಂದ 11ರ ನಡುವೆ ಈ ಪರಿಸ್ಥಿತಿಯಲ್ಲಿ ಅತ್ಯಲ್ಪ ಸುಧಾರಣೆಯಷ್ಟೇ ನಿರೀಕ್ಷಿಸಲಾಗಿದೆ ಎಂದು ಇಲಾಖೆ ಹೇಳಿದೆ.

ಹೊಸ ವಿಸ್ತೃತ ಶ್ರೇಣಿಯ ಮುನ್ಸೂಚನೆಯ ಪ್ರಕಾರ, ಜೂನ್ 11ರ ನಂತರವೇ ಮಳೆ ಚುರುಕಾಗುವ ಸಾಧ್ಯತೆ ಇದೆ. ಪಶ್ಚಿಮ ಫೆಸಿಫಿಕ್ ಪ್ರದೇಶದಲ್ಲಿ ಚಂಡಮಾರುತವೊಂದು ರೂಪುಗೊಳ್ಳುತ್ತಿದ್ದು, ಇದು ಅರಬೀ ಸಮುದ್ರ ಮತ್ತು ಬಂಗಾಳ ಕೊಲ್ಲಿಯ ತೇವಾಂಶವನ್ನು ತನ್ನತ್ತ ಸೆಳೆಯುತ್ತಿದೆ. ಲಕ್ಷದ್ವೀಪ ಪ್ರದೇಶದಲ್ಲಿ ಚಂಡ ಮಾರುತ ಪ್ರಭಾವ ಕಂಡುಬರುತ್ತಿದೆ. ಇದು ಕೇರಳದ ಭೂ ಭಾಗದಲ್ಲಿ ಮಳೆಯಾಗದಂತೆ ತಡೆಯುತ್ತಿದೆ.

ಸಾಮಾನ್ಯವಾಗಿ ಜೂನ್ 1ರ ಸುಮಾರಿಗೆ ಮುಂಗಾರು ಮಳೆ ಕೇರಳಕ್ಕೆ ಪ್ರವೇಶಿಸುತ್ತಿದೆ. ಆದರೆ ಈ ವರ್ಷ ಮೇ 26ರಂದೇ ಮುಂಗಾರು ಮಳೆ ಪ್ರವೇಶಿಸುವ ಸಾಧ್ಯತೆ ಇದೆ ಎಂದು ಮೇ 15ರಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಆದರೆ ಈಗ ಅದರಲ್ಲಿ ಬದಲಾವಣೆ ಸೂಚನೆ ನೀಡಲಾಗಿದೆ. ಮುಂಗಾರು ಮಳೆ ಮಂದಗತಿಯಲ್ಲಿ ಪ್ರವೇಶಿಸುವ ಸಾಧ್ಯತೆ ಇದೆ. ಆದರೂ ಮೇ 28ರಿಂದ ಜೂನ್ 3ರವರೆಗೆ ನೈರುತ್ಯ ಮುಂಗಾರು ಮಳೆ ದಕ್ಷಿಣ ಅರಬೀ ಸಮುದ್ರದ ಭಾಗಗಳು, ಬಂಗಾಳ ಕೊಲ್ಲಿ ಮತ್ತು ಈಶಾನ್ಯ ಭಾರತದ ಕಡೆಯಲ್ಲಿ ಅನುಕೂಲಕರ ವಾತಾವರಣ ಇರಲಿದೆ ಎಂದೂ ಇಲಾಖೆ ಹೇಳಿದೆ.

You cannot copy contents of this page