ತಿರುವನಂತಪುರ: ವಿವಾದಿತ ಕಲ್ಲಿದ್ದಲು ಗಣಿ ಕಂಪೆನಿ ಕೊಚ್ಚಿನ್ ಮಿನರಲ್ಸ್ ಆಂಡ್ ರೂಟೆಲ್ಸ್ ಲಿಮಿಟೆಡ್ (ಸಿಎಂಆರ್‌ಎಲ್) ಹಾಗೂ ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ರ ಪುತ್ರಿ ವೀಣಾ ವಿಜಯನ್‌ರ ಮಾಲಕತ್ವದ ಲ್ಲಿರುವ ಬೆಂಗಳೂರು ಮೂಲಕ ಐಟಿ ಸಂಸ್ಥೆಯಾಗಿರುವ ಎಕ್ಸಾಲಾಜಿಕಲ್ ಸೊಲ್ಯೂಶನ್ಸ್ ನಡುವೆ ನಡೆದಿದೆ ಎನ್ನಲಾದ 1.72 ಕೋಟಿ ರೂ.ಗಳ ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿ ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ರ ತಿರುವನಂ ತಪುರದಲ್ಲಿರುವ ಬಾಡಿಗೆ ಮನೆಗೆ ಜಾರಿ ನಿರ್ದೇಶನಾಲಯ (ಇ.ಡಿ) ಮೊನ್ನೆ ನಡೆಸಿದ ದಾಳಿ ಮತ್ತು ತಪಾಸಣೆ ಬಳಿಕ ಕಾರುಗಳಲ್ಲಿ ಹಿಂತಿರುಗುತ್ತಿದ್ದ ಇ.ಡಿ ಅಧಿಕಾರಿಗಳ ಮೇಲೆ ದಾಳಿ ನಡೆಸಿ ಅವರು ಪ್ರಯಾಣಿಸುತ್ತಿದ್ದ ಕಾರುಗಳನ್ನು ಹೊಡೆದು ಹಾನಿಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿ ಒಟ್ಟು 19 ಮಂದಿ ಸಿಪಿಎಂ ಕಾರ್ಯಕರ್ತರ ವಿರುದ್ಧ ತಿರುವನಂತಪುರ ಮ್ಯೂಸಿಯಂ ಪೊಲೀಸರು ಕೊಲೆಯತ್ನ ಪ್ರಕರಣ ದಾಖಲಿಸಿ ಅವರನ್ನು ಬಂಧಿಸಿದ್ದಾರೆ. ಬಂಧಿತರನ್ನು ನಂತರ ನ್ಯಾಯಾಲ ಯದ ನಿರ್ದೇಶ ಪ್ರಕಾರ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ. ಸಿಪಿಎಂನ ತಿರುವನಂತಪುರ ಬ್ರಾಂಚ್ ಕಾರ್ಯದರ್ಶಿ ನಿತಿನ್‌ರಾಜ್, ಡಿವೈಎಫ್‌ಐ ಜಿಲ್ಲಾ ಉಪಾಧ್ಯಕ್ಷ ಶಾಹಿನ್, ಡಿವೈಎಫ್‌ಐಯ ನೇಮಂ ಬ್ಲೋಕ್ ಕಾರ್ಯದರ್ಶಿ ಶ್ರೀಜಿತ್, ಡಿವೈಎಫ್‌ಐ ವಲಯ ಸಮಿತಿ ಸದಸ್ಯ ಜೀವನ್ ಮತ್ತು ಡಿವೈಎಪ್‌ಐ ಕರಿವಿಳ ಘಟಕ ಕಾರ್ಯದರ್ಶಿ ಮನೋಜ್ ಸೇರಿದಂತೆ ಒಟ್ಟು 19 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಇದರಲ್ಲಿ ಓರ್ವ ಪೊಲೀಸ್ ಠಾಣೆಯಲ್ಲಿ ನೇರವಾಗಿ ಶರಣಾಗಿದ್ದನು. ಈ ಪ್ರಕರಣದಲ್ಲಿ ಇನ್ನಷ್ಟು ಮಂದಿ ಬಂಧನಕ್ಕೊಳಗಾಗುವ ಸಾಧ್ಯತೆ ಇದೆ. ಇ.ಡಿ ತಂಡದ ಮೇಲೆ ದಾಳಿ ನಡೆಸಿದ ಮಾತ್ರವಲ್ಲದೆ ಪೊಲೀಸರ ಮೇಲೆ ದಾಳಿ ನಡೆಸಿದ ಬಗ್ಗೆಯೂ ಪೊಲೀಸರು ಇನ್ನೊಂದೆಡೆ ಬೇರೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮಾರಕಾಯುಧಗಳೊಂದಿಗೆ ನಮ್ಮ ಮೇಲೆ ದಾಳಿ ನಡೆಸಿರುವುದಾಗಿ ಇ.ಡಿ ಅಧಿಕಾರಿಗಳು ನೀಡಿದ ದೂರಿನಂತೆ ಪೊಲೀಸರು ಈ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ದಾಳಿಯಲ್ಲಿ ಇ.ಡಿ ಅಧಿಕಾರಿಗಳು ಪ್ರಯಾಣಿಸುತ್ತಿದ್ದ ಬಾಡಿಗೆ ಕಾರಿನ ಚಾಲಕ ಶ್ಯಾಮ್ ಜಿತ್ ಕೂಡಾ ಗಾಯಗೊಂಡಿದ್ದಾರೆ. ಅವರ ಕಾರಿಗೆ ಕಗ್ಗಲ್ಲು ಮತ್ತು ಇಟ್ಟಿಗೆ ಎಸೆದು ಹಾನಿಗೊಳಿಸಲಾಗಿದೆ. ಆ ಕಾರು ಮಾತ್ರವಲ್ಲ ಇ.ಡಿ ತಂಡ ಪ್ರಯಾಣಿಸುತ್ತಿದ್ದ ಇತರ ಕಾರುಗಳನ್ನು ಹೊಡೆದು ಹಾನಿಗೊಳಿಸಲಾಗಿದೆ.
ಪಿಣರಾಯಿ ವಿಜಯನ್‌ರ ಕಣ್ಣೂರಿನಲ್ಲಿರುವ ಮನೆ, ಅವರ ಅಳಿಯ ಮಾಜಿ ಸಚಿವ ಮೊಹಮ್ಮದ್ ರಿಯಾಸ್‌ರ ಕಲ್ಲಿಕೋಟೆಯಲ್ಲಿರುವ ಮನೆ ಸೇರಿದಂತೆ 10 ಕೇಂದ್ರಗಳಿಗೆ ಮೊನ್ನೆ ಇ.ಡಿ ತಂಡ ಏಕಕಾಲದಲ್ಲಿ ದಾಳಿ ಮತ್ತು ತಪಾಸಣೆ ನಡೆಸಿತ್ತು. ಅದನ್ನು ಪ್ರತಿಭಟಿಸಿ ಸಿಪಿಎಂ ಕಾರ್ಯಕರ್ತರು ತಿರವನಂತಪುರ ಮಾತ್ರವಲ್ಲ ಕಣ್ಣೂರು ಸೇರಿದಂತೆ ರಾಜ್ಯಾದ್ಯಂತವಾಗಿ ಬೀದಿಗಳಲ್ಲಿ ಪ್ರತಿಭಟನೆ ನಡೆಸಿದ್ದರು.






