ಶಾಲೆಯನ್ನು ಉನ್ನತಿಗೇರಿಸಿದ ಮುಖ್ಯೋಪಾಧ್ಯಾಯನಿಗೆ ನಿವೃತ್ತಿ ವೇಳೆ ಸ್ಥಳೀಯರಿಂದ ಕಾರು ಉಡುಗೊರೆ

ಕಾಸರಗೋಡು: ಸರಕಾರಿ ಯುಪಿ ಶಾಲೆ ಹಾಗೂ ವಿದ್ಯಾರ್ಥಿಗಳ ಅಧ್ಯಯನ ಗುಣಮಟ್ಟವನ್ನು ಹೆಚ್ಚಿಸಿದ ಮುಖ್ಯೋಪಾಧ್ಯಾಯ ಸೇವೆಯಿಂದ ನಿವೃತ್ತನಾದಾಗ ಶಾಲಾ ಪಿಟಿಎ ಸ್ನೇಹದ ಸಂಕೇತವಾಗಿ  13 ಲಕ್ಷ ರೂ. ಮೌಲ್ಯದ ಕಾರು ಉಡುಗೊರೆಯಾಗಿ ನೀಡಿದೆ. ಚೆಮ್ಮನಾಡು ವೆಸ್ಟ್ ಸರಕಾರಿ ಯುಪಿ ಶಾಲೆಯಿಂದ ಮೊನ್ನೆ ನಿವೃತ್ತ ರಾದ ಮುಖ್ಯೋಪಾಧ್ಯಾಯ ಪಿ.ಟಿ. ಬೆನ್ನಿಯವರಿಗೆ ಸ್ಥಳೀಯ ನಾಗರಿಕರ ಉಪಸ್ಥಿತಿಯಲ್ಲಿ ಈ ಉಡುಗೊರೆಯನ್ನು ನೀಡಿ ಬೀಳ್ಕೊಡಲಾಗಿದೆ.

ಎಪ್ರಿಲ್ 18ರಂದು ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಉತ್ಸವ ಸಮಿತಿ ನೀಡಿದ ಬೀಳ್ಕೊಡುಗೆಯಲ್ಲಿ ಈ ಕಾರನ್ನು ಉಡುಗೊರೆಯಾಗಿ ನೀಡುವ ಬಗ್ಗೆ ಘೋಷಿಸಲಾಗಿತ್ತು. ಹೆತ್ತವರು, ಸ್ಥಳೀಯರು, ವಿದ್ಯಾರ್ಥಿ ಪ್ರತಿನಿಧಿಗಳು ಸೇರಿ ಈ ಅಧ್ಯಾಪಕನಿಗೆ ಕಾರಿನ ಮೂಲಕ ಬೀಳ್ಕೊಡುಗೆ ನೀಡಿದ್ದಾರೆ. ಮುಖ್ಯೋಪಾಧ್ಯಾಯ ಬೆನ್ನಿ ಸ್ವತಃ ಕಾರನ್ನು ಚಲಾಯಿಸಿಕೊಂಡು ಉಳಿಯತ್ತಡ್ಕದ ತನ್ನ ಮನೆಗೆ ತೆರಳಿದ್ದಾರೆ. ಪಿಟಿಎ ಅಧ್ಯಕ್ಷ ಅಮೀರ್ ಬಿ. ಪಾಲೋತ್ತ್, ಉಪಾಧ್ಯಕ್ಷ ಸಿ.ಎಂ. ಸಫರುಲ್ಲ, ಸ್ವಾಗತ ಸಮಿತಿ ಕೋಶಾಧಿಕಾರಿ ಎಂ.ಕೆ. ಮಹರೂಫ್, ಎಸ್‌ಎಂಸಿ ಅಧ್ಯಕ್ಷ ನಾಸರ್ ಕುರಿಕ್ಕಳ್, ಸಂಚಾಲಕ ಸಿ.ಎಲ್. ಮುಹಮ್ಮದ್ ಇಕ್ಬಾಲ್, ಪಿ. ತಾರೀಖ್ ಮೊದಲಾದವರು ಜೊತೆಗಿದ್ದರು.

ಸೀಮಿತ ಕಟ್ಟಡದಿಂದ ಕಲಿಕೆಗೆ ಸಂಕಷ್ಟ ಉಂಟಾದ ಸಂದರ್ಭದಲ್ಲಿ ಏಳು ವರ್ಷದೊಳಗೆ ಹೆತ್ತವರನ್ನು, ವಿದ್ಯಾರ್ಥಿಗಳನ್ನು, ಸ್ಥಳೀಯರನ್ನು ಸೇರಿಸಿಕೊಂಡು ಉತ್ತಮ ಸೌಕರ್ಯದ ಶಾಲೆಯಾಗಿ ಇದನ್ನು ಬದಲಾಯಿಸಿದ್ದಾರೆ. ವಿವಿಧ ಪರೀಕ್ಷೆಗಳಲ್ಲೂ, ಕ್ರೀಡಾ ಸ್ಪರ್ಧೆಗಳಲ್ಲೂ ಶಾಲೆಯನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ದಿದ್ದು, ಸ್ವಂತ ಹಣವನ್ನು ಇವರು ಶಾಲೆಗಾಗಿ ವೆಚ್ಚ ಮಾಡಿದ್ದಾರೆ.

33 ವರ್ಷದ ಇವರ ಅಧ್ಯಾಪನ ಜೀವನದಲ್ಲಿ ವಿವಿಧ ಹುದ್ದೆಗಳನ್ನು ನಿಭಾಯಿಸಿದ್ದಾರೆ. ರೋಟರಿ ಕ್ಲಬ್‌ನ ನ್ಯಾಶನಲ್ ಬಿಲ್ಡರ್ ಅವಾರ್ಡ್, ಲಯನ್ಸ್ ಅವಾರ್ಡ್, ಸದ್ಭಾವನಾ ಅಧ್ಯಾಪಕ ಅವಾರ್ಡ್, ನಿಶಾಂಕ್ ಭಾರತ್ ಗ್ರೀನ್ ಟ್ರೋನಿಕಲ್ಸ್ ಅವಾರ್ಡ್ ಸಹಿತ ಹಲವಾರು ಪ್ರಶಸ್ತಿಗಳು ಇವರನ್ನು ಅರಸಿ ಬಂದಿವೆ.

You cannot copy contents of this page