ತಿರುವನಂತಪುರ: ಬಿಜೆಪಿ ಕೇರಳ ಘಟಕ ನೇತಾರರ ಪೈಕಿ ಕೆಲವರಿಗೆ ಈ ಬಾರಿ ಪಕ್ಷದ ರಾಷ್ಟ್ರೀಯ ನಾಯಕತ್ವದಲ್ಲಿ ಸ್ಥಾನ ಲಭಿಸುವ ಸಾಧ್ಯತೆ ಇದೆ ಎಂದು ಅಂದಾಜಿಸ ಲಾಗಿದೆ. ಇದರಂತೆ ಬಿಜೆಪಿ ಮಾಜಿ ರಾಜ್ಯ ಅಧ್ಯಕ್ಷ ಕೆ. ಸುರೇಂದ್ರನ್‌ರಿಗೆ ರಾಜ್ಯಸಭಾ ಸೀಟು ಅಥವಾ ಪಕ್ಷದ ಕೇಂದ್ರ ನಾಯಕತ್ವದಲ್ಲಿ ಪ್ರಧಾನ ಹುದ್ದೆ ಲಭಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಪಕ್ಷದ ಅಧ್ಯಕ್ಷನಾಗಿದ್ದ ವೇಳೆ ರಾಜ್ಯದಲ್ಲಿ ನಡೆಸಿದ ಉತ್ತಮ ಕಾರ್ಯವನ್ನು ಪರಿಗಣಿಸಿ ಬಿಜೆಪಿ ಕೇಂದ್ರ ನಾಯಕತ್ವ ಕೆ. ಸುರೇಂದ್ರನ್‌ರಿಗೆ ಉತ್ತಮ ಸ್ಥಾನ ನೀಡಲಿದೆ ಎಂದು ಸೂಚನೆಯಿದೆ. ಹತ್ತು ರಾಜ್ಯಗಳ 24 ರಾಜ್ಯಸಭಾ ಸೀಟುಗಳಿಗೆ ಜೂನ್ 18ರಂದು ಚುನಾವಣೆ ನಡೆಯಲಿದೆ. ಈ ಪೈಕಿ 17 ಸೀಟುಗಳು ಬಿಜೆಪಿಗೆ ಖಚಿತವಾಗಿ ಲಭಿಸಲಿದೆ. ರಾಜ್ಯದಿಂದ ಕೇಂದ್ರ ಸಚಿವ ಜೋರ್ಜ್ ಕುರ‍್ಯನ್‌ರ ರಾಜ್ಯಸಭಾ ಕಾಲಾವಧಿ ಶೀಘ್ರ ಕೊನೆಗೊಳ್ಳಲಿದೆ. ಅವರಿಗೆ ಬಳಿಕ ಪಕ್ಷದ ಜವಾಬ್ದಾರಿ ನೀಡಲಾಗುವುದೆಂದು ಹೇಳಲಾ ಗುತ್ತಿದೆ. ಹಾಗಾದಲ್ಲಿ ಕೇಂದ್ರ ಸಚಿವ ಸಂಪುಟಕ್ಕೆ ಕೆ. ಸುರೇಂದ್ರನ್ ಅಥವಾ ಸಿ. ಸದಾನಂದನ್ ಮಾಸ್ತರ್‌ರನ್ನು ಪರಿಗಣಿಸುವ ಸಾಧ್ಯತೆ ಇದೆ. ಸದಾನಂದನ್ ಮಾಸ್ತರ್ ಪ್ರಸ್ತುತ ರಾಜ್ಯಸಭಾ ಸದಸ್ಯನಾಗಿದ್ದಾರೆ. ಇದೇ ವೇಳೆ ಅನಿಲ್ ಆಂಟನಿ, ಅನೂಪ್ ಆಂಟನಿ ಎಂಬಿವರನ್ನು ರಾಜ್ಯ ಸಭೆಗೆ ಪರಿಗಣಿಸುವ ಸಾಧ್ಯತೆ ಇದೆ.
ರಾಷ್ಟ್ರಮಟ್ಟದಲ್ಲಿ ಪಕ್ಷದ ಹೊಣೆಗಾರಿಕೆಗೆ ಕೆ. ಸುರೇಂದ್ರನ್, ಜೋರ್ಜ್ ಕುರ‍್ಯನ್, ಶೋಭಾ ಸುರೇಂದ್ರನ್, ಪದ್ಮಜಾ ವೇಣುಗೋಪಾಲ್, ಅನೂಪ್ ಆಂಟನಿ ಎಂಬಿವರ ಹೆಸರು ಪರಿಗಣನೆಯಲ್ಲಿದೆ. ಪ್ರಸ್ತುತ ಎ.ಪಿ. ಅಬ್ದುಲ್ಲ ಕುಟ್ಟಿ, ಅನಿಲ್ ಆಂಟನಿ ಎಂಬಿವರಿಗೆ ರಾಷ್ಟ್ರೀಯ ಮಟ್ಟದಲ್ಲಿ ಪಕ್ಷದ ಹೊಣೆಗಾರಿಕೆಯಿದೆ. ಶೋಭಾ ಸುರೇಂದ್ರನ್‌ರನ್ನು ಮಹಿಳಾಮೋರ್ಛಾ ರಾಷ್ಟ್ರೀಯ ಅಧ್ಯಕ್ಷೆ ಅಥವಾ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಪರಿಗಣಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಅದೇನೇ ಆದರೂ ಈ ಬಾರಿ ಪಕ್ಷದ ಕೇರಳ ಘಟಕದ ನಾಯಕರಿಗೆ ಕೇಂದ್ರ ನಾಯಕತ್ವದಲ್ಲಿ ಉನ್ನತ ಸ್ಥಾನ ಲಭಿಸುವುದಂತೂ ಖಚಿತಗೊಂಡಿದೆ.
ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮೂರು ಸೀಟುಗಳನ್ನು ಗೆದ್ದುಕೊಂಡು ಉತ್ತಮ ಸಾಧನೆ ಮಾಡಿರುವುದು ಕೇಂದ್ರ ನಾಯಕತ್ವಕ್ಕೆ ನೆಮ್ಮದಿ ಮೂಡಿಸಿದೆ. ಹಾಗಿರುವಾಗ ಕೇರಳದ ನೇತಾರರಿಗೆ ಇನ್ನಷ್ಟು ಹೊಣೆಗಾರಿಕೆ ನೀಡಿದಲ್ಲಿ ಮುಂದೆ ಅದರ ಪ್ರಯೋಜನ ಲಭಿಸಬಹುದು ಎಂಬ ಲೆಕ್ಕಾಚಾರ ವನ್ನು ಕೇಂದ್ರ ನಾಯಕತ್ವ ಹೊಂದಿದೆ ಎಂದೂ ಹೇಳಲಾಗುತ್ತಿದೆ.







