ಕೊಚ್ಚಿ: ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಯುವತಿಯರೊಂದಿಗೆ ಅನುಚಿತವಾಗಿ ವರ್ತಿಸಿ ಚುಡಾಯಿಸಿದ ಯುವಕರನ್ನು ಪ್ರಶ್ನಿಸಿದ ಯುವತಿಯರಿಗೆ ಯುವಕರ ತಂಡ ಸಾರ್ವಜನಿಕವಾಗಿ ಹಲ್ಲೆಗೈದ ಘಟನೆ ಕೊಚ್ಚಿಯ ಕಲೂರ್‌ನಲ್ಲಿ ನಡೆದಿದೆ.
ಈ ಸಂಬಂಧ ಮೂವರನ್ನು ಪೊಲೀಸರು ಸೆರೆಹಿಡಿದಿದ್ದು, ಇನ್ನೂ ಹಲವರು ತಲೆಮರೆಸಿಕೊಂಡಿದ್ದಾರೆ. ಮಲಪ್ಪುರಂ ಎಡಪ್ಪಾಲ್ ನಿವಾಸಿ ಅಲ್ಬಿನ್, ಪಾಲಕ್ಕಾಡ್ ಮಣ್ಣಾರಕಾಡ್ ನಿವಾಸಿಗಳಾದ ಸಾಬಿತ್, ಅರುಣ್ ಎಂಬಿವರು ಸೆರೆಗೀಡಾದವರಾಗಿದ್ದಾರೆ. ಪ್ರಕರಣದ ಒಂದನೇ ಆರೋಪಿಯಾದ ಪಾಲಕ್ಕಾಡ್ ಮಣ್ಣಾರಕ್ಕಾಡ್ ನಿವಾಸಿ ಅಕ್ಭರ್ ನಡೆಸುವ ಲಾಡ್ಜ್‌ನಲ್ಲಿ ಇತರ ಆರೋಪಿಗಳು ನೌಕರರಾಗಿದ್ದಾರೆ.
ಎರ್ನಾಕುಳಂ ನೋರ್ತ್ ಪೊಲೀಸರು ನಡೆಸಿದ ಕಾರ್ಯಾಚ ರಣೆಯಲ್ಲಿ ಈ ಮೂವರು ಆರೋಪಿ ಗಳನ್ನು ಸೆರೆಹಿಡಿಯಲಾಗಿದೆ.
ರೈಲ್ವೇ ರಿಕ್ರೂಟ್‌ಮೆಂಟ್ ಬೋರ್ಡ್ ಪರೀಕ್ಷೆಗಾಗಿ ಕಲೂರ್‌ನಲ್ಲಿ ವಾಸಿಸಿ ಕಲಿಯುವ ಪಾಲಕ್ಕಾಡ್ ಹಾಗೂ ಕಲ್ಲಿಕೋಟೆ ನಿವಾಸಿಗಳಾದ ಇಬ್ಬರು ಯುವತಿಯರ ಮೇಲೆ ಆರೋಪಿಗಳು ಹಲ್ಲೆಗೈದಿದ್ದಾರೆ. ನಿನ್ನೆ ಮುಂಜಾನೆ ೪.೩೦ರ ವೇಳೆ ಕಲೂರ್ ಪಾವಕ್ಕುಳ ಕ್ಷೇತ್ರ ಸಮೀಪ ಚಕ್ಕಾಲಪಾಡತ್ ಎಂಬಲ್ಲಿ ಘಟನೆ ನಡೆದಿದೆ.
ಮುಂಜಾನೆ ವೇಳೆ ವಾಸಸ್ಥಳದಿಂದ ಹೊರಗೆ ಹೋಗಿ ಚಹಾ ಕುಡಿದು ಮರಳುತ್ತಿದ್ದ ಯುವತಿಯರ ಮೇಲೆ ತಂಡ ಹಲ್ಲೆಗೈದಿದೆ. ಇದೇ ವೇಳೆ ಹಲ್ಲೆಗೈದ ತಂಡದಲ್ಲಿ ಹತ್ತು ಮಂದಿಯಿದ್ದು ಈ ಪೈಕಿ ಇಬ್ಬರು ಯುವತಿಯರಾಗಿದ್ದಾರೆನ್ನಲಾಗಿದೆ. ಯುವತಿಯರನ್ನು ತಂಡ ಹಿಯಾಳಿಸಿ ಚುಡಾಯಿಸಲೆತ್ನಿಸಿದ್ದು ಇದನ್ನು ಪ್ರಶ್ನಿಸಿದಾಗ ತಂಡ ಹಲ್ಲೆಗೈದಿದೆ. ಈ ವೇಳೆ ನೆಲಕ್ಕೆ ಬಿದ್ದ ಯುವತಿಯನ್ನು ತಲೆಕೂದಲು ಹಿಡಿದು ಎಳೆದು ಮೆಟ್ಟಿ ಗಾಯಗೊಳಿಸಿದ್ದು, ಬಳಿಕ ಧರಿಸಿದ್ದ ವಸ್ತ್ರ ಹರಿಯಲು ಯತ್ನಿಸಿರುವುದಾಗಿ ದೂರಲಾಗಿದೆ.
ಘಟನೆಗೆ ಸಂಬಂಧಿಸಿ ಪೊಲೀಸರು ಕೇಸು ದಾಖಲಿಸಿ ತನಿಖ ಮುಂದುವರಿಸಿದ್ದು, ಆರೋಪಿ ಅಕ್ಬರ್‌ನ ಲಾಡ್ದ್‌ಗೆ ಪೊಲೀಸರು ದಾಳಿ ನಡೆಸಿದ್ದಾರೆ. ಉಳಿದ ಆರೋಪಿಗಳ ಪತ್ತೆಗಾಗಿ ಬಲೆಬೀಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.







