ಕಾಸರಗೋಡು: ಶಾಲಾ ಪ್ರವೇಶೋತ್ಸವದಂಗವಾಗಿ ಎಸ್‌ಎಫ್‌ಐ ಸ್ಥಾಪಿಸಿದ್ದ ಬ್ಯಾನರ್‌ನ್ನು ಪೊಲೀಸರು ತೆರವುಗೊಳಿಸಿರುವುದನ್ನು ಪ್ರತಿಭಟಿಸಿ ಪ್ರತಿಭಟನಾ ಮೆರವಣಿಗೆ ನಡೆಸಿದ ಗ್ರಾಮ ಪಂಚಾಯತ್ ಅಧ್ಯಕ್ಷರೂ ಸೇರಿದಂತೆ 42 ಮಂದಿ ವಿರುದ್ಧ ಅಂಬಲತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪುಲ್ಲೂರು ಪೆರಿಯ ಪಂಚಾಯತ್ ಅಧ್ಯಕ್ಷೆ ಸಿ.ಕೆ. ಸಬಿತ, ಜ್ಯೋತಿಬಸು,ಅನೂಪ್,ಮಂಜೂಷ, ನಾರಾಯಣ ಬಂಗ್ಲಾವ್ ಸೇರಿದಂತೆ ೪೨ ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಪುಲ್ಲೂರು ಇರಿಯ ಸರಕಾರಿ ಪ್ರೌಢಶಾಲೆಯಲ್ಲಿ ಪ್ರವೇಶೋತ್ಸವ ದಂಗವಾಗಿ ಎಸ್‌ಎಫ್‌ಐ ಸ್ವಾಗತ ಬ್ಯಾನರ್ ಸ್ಥಾಪಿಸಿತ್ತು. ಶಾಲೆಯಲ್ಲಿ ವಿದ್ಯಾರ್ಥಿ ರಾಜಕೀಯ ಸಲ್ಲದೆಂಬ ನಿಲುವನ್ನು ಪ್ರಸ್ತುತ ಶಾಲೆಯ ಶಿಕ್ಷಕ-ರಕ್ಷಕ ಸಮಿತಿ ತಳೆದಿತ್ತೆನ್ನಲಾಗಿದೆ. ಆದರೆ ಶಾಲೆಗೆ ಹೊಸದಾಗಿ ಸೇರ್ಪಡೆಗೊಳ್ಳುವ ವಿದ್ಯಾರ್ಥಿಗಳನ್ನು ಸ್ವಾಗತಿಸಲೆಂದು ಎಸ್‌ಎಫ್‌ಐ ಇಲ್ಲಿ ಬ್ಯಾನರ್ ಸ್ಥಾಪಿಸಿತ್ತು. ಅದನ್ನು ಪಂಚಾಯತ್ ಸದಸ್ಯರೋರ್ವರು ಸೇರಿದಂತೆ ಹಲವು ವಿದ್ಯಾರ್ಥಿ ಸಂಘಟನೆಗಳು ಮತ್ತು ಕೆಲವು ವಿದ್ಯಾರ್ಥಿಗಳ ಹೆತ್ತವರು ವಿರೋಧಿಸಿ ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ ಪೊಲೀಸರು ಆಗಮಿಸಿ ಆ ಬ್ಯಾನರ್‌ನ್ನು ಅಲ್ಲಿಂದ ತೆರವುಗೊಳಿಸಿದರು.ಆದರೆ ಅಲ್ಲಿ ಮತ್ತೊಂದು ಬ್ಯಾನರ್‌ನ್ನು ಬಳಿಕ ಸ್ಥಾಪಿಸಲಾಗಿತ್ತು. ಅದನ್ನು ಗಮನಿಸಿದ ಪೊಲೀಸರು ಆ ಬ್ಯಾನರ್ ತೆರವುಗೊಳಿಸಲು ಅಂದು ಸಂಜೆ ತನಕ ಅವಕಾಶ ನೀಡಿದ್ದರು. ಅದರೊಳಗೆ ಬ್ಯಾನರನ್ನು ತೆರವುಗೊಳಿಸದೇ ಇದ್ದುದನ್ನು ಗಮನಿಸಿ ಪೊಲೀಸರು ಮತ್ತೆ ಆಗಮಿಸಿ ಆ ಬ್ಯಾನರ್ ತೆರವುಗೊಳಿಸಿದ್ದಾರೆ. ಅದನ್ನು ಪ್ರತಿಭಟಿಸಿ ಸಿಪಿಎಂ, ಡಿವೈಎಫ್‌ಐ ಮತ್ತು ಎಸ್‌ಎಫ್‌ಐ ಕಾರ್ಯಕರ್ತರು ಪ್ರತಿಭಟನೆ ಮೆರವಣಿಗೆ ನಡೆಸಿದರು. ಅದಕ್ಕೆ ಸಂಬಂಧಿಸಿ ೪೨ ಮಂದಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.






