ಕುಂಬಳೆ: ವರ್ಕಾಡಿ ಬಳಿ ಮಜೀರ್ಪಳ್ಳದ ಜ್ಯುವೆಲ್ಲರಿ ಕಳವಿಗೆ ಯತ್ನಿಸಿದ ಪ್ರಕರಣದಲ್ಲಿ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ.
ಅಶ್ರಫ್ ಹಾಗೂ ಶಹೀರ್ ಎಂಬವರು ಪಾಲುದಾರರಾಗಿರುವ ‘ಚೋಯ್ಸ್ ಗೋಲ್ಡ್’ ಎಂಬ ಜ್ಯುವೆಲ್ಲರಿಯಿಂದ ಕಳವು ಯತ್ನ ನಡೆದಿದೆ. ಎಂದಿನಂತೆ ಮೊನ್ನೆ ರಾತ್ರಿ 8 ಗಂಟೆಗೆ ಜ್ಯುವೆಲ್ಲರಿ ಮುಚ್ಚಿ ಇವರು ಮರಳಿದ್ದರು. ಇಲ್ಲಿ ಕಳವು ಯತ್ನ ನಡೆದಿರುವುದು ನಿನ್ನೆ ಬೆಳಿಗ್ಗೆ ಅರಿವಿಗೆ ಬಂದಿದೆ. ಮೊನ್ನೆ ರಾತ್ರಿ ಕಳ್ಳರು ಈ ಕೃತ್ಯ ನಡೆಸಿರಬಹುದೆಂದು ಅಂದಾಜಿಸಲಾಗಿದೆ. ಜ್ಯುವೆಲ್ಲರಿಯ ಮುಂಭಾಗದ ಶೆಟರ್ನ್ನು ಜಾಕಿ ಹಾಗೂ ಲಿವರ್ ಬಳಸಿ ಎತ್ತಿದ ಸ್ಥಿತಿಯಲ್ಲಿ ಕಂಡುಬಂದಿತ್ತು. ವಿಷಯ ತಿಳಿದು ಮಂಜೇಶ್ವರ ಪೊಲೀಸರು ಸ್ಥಳಕ್ಕೆ ತಲುಪಿ ಪರಿಶೀಲನೆ ನಡೆಸಿದ್ದಾರೆ.
ಮಳೆಗಾಲ ಆಗಮಿಸುತ್ತಲೇ ಕುಖ್ಯಾತ ಕಳ್ಳರು ಜಿಲ್ಲೆಗೆ ತಲುಪಿರುವುದಾಗಿ ಈ ಮೊದಲೇ ಸೂಚನೆ ಲಭಿಸಿತ್ತು. ಈ ಜ್ಯುವೆಲ್ಲರಿ ಕಳವು ಯತ್ನದಲ್ಲೂ ಇದೇ ತಂಡ ಭಾಗಿಯಾಗಿರಬಹುದೆಂದು ಸಂಶಯಿಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.






