ಕಾಸರಗೋಡು: ರಾಜ್ಯ ಮೋಟಾರು ವಾಹನ ಇಲಾಖೆ ಜಿಲ್ಲೆಯ ಮೂರು ಆರ್‌ಟಿಒ ಕಚೇರಿಗಳಿಗೆ ವಿಜಿಲೆನ್ಸ್ ತಂಡ ಏಕಕಾಲದಲ್ಲಿ ದಾಳಿ ನಡೆಸಿದೆ. ಕಾಸರಗೋಡು ವಿಜಿಲೆನ್ಸ್ ಆಂಡ್ ಆಂಟಿ ಕರಪ್ಶನ್ ಬ್ಯೂರೋದ ಡಿವೈಎಸ್ಪಿ ಉಣ್ಣಿಕೃಷ್ಣನ್ ನೇತೃತ್ವದ ತಂಡಗಳು ಈ ದಾಳಿ ನಡೆಸಿವೆ. ಈ ದಾಳಿಯಲ್ಲಿ ಕಾಸರಗೋಡು ಆರ್‌ಟಿಒ ಕಚೇರಿಯ ಆವರಣದ ಹೂವಿನ ಕುಂಡದಲ್ಲಿ ಬಚ್ಚಿಡಲಾಗಿದ್ದ 17,150 ರೂ.ವನ್ನು ವಿಜಿಲೆನ್ಸ್ ತಂಡ ಪತ್ತೆಹಚ್ಚಿ ವಶಕ್ಕೆ ತೆಗೆದುಕೊಂಡಿದೆ. ಕಾಸರಗೋಡು ಮಾತ್ರವಲ್ಲ ಹೊಸದುರ್ಗ ಮತ್ತು ವೆಳ್ಳರಿಕುಂಡು ಆರ್‌ಟಿಒ ಕಚೇರಿಗಳಿಗೂ ವಿಜಿಲೆನ್ಸ್ ದಾಳಿ ಮತ್ತು ಪರಿಶೀಲನೆ ನಡೆಸಿದ್ದು, ಇದರಲ್ಲಿ ಹಣ ಮಾತ್ರವಲ್ಲದೆ ಹಲವು ಅವ್ಯವಹಾರಗಳು ಪತ್ತೆಯಾಗಿದೆಯೆಂದು ವಿಜಿಲೆನ್ಸ್ ಅಧಿಕಾರಿಗಳು ತಿಳಿಸಿದ್ದಾರೆ.
ಹೊಸದುರ್ಗ ಆರ್‌ಟಿಒ ಕಚೇರಿಯಲ್ಲಿ ನಡೆಸಿದ ದಾಳಿಯಲ್ಲಿ ಆ ಕಚೇರಿಯ ಸಿಬ್ಬಂದಿಯೋರ್ವರ ಕೈಯಲ್ಲಿ ವಾಹನ ಸಂಬಂಧಿಸಿದ ಅರ್ಜಿಗಳು, ದಾಖಲುಪತ್ರಗಳು ಹಾಗೂ ಏಜೆಂಟರುಗಳಿಗೆ ನೀಡಬೇಕಾಗಿದ್ದ ೨೪ರಷ್ಟು ಅನುಮತಿ ಪತ್ರಗಳು ಪತ್ತೆಯಾಗಿದೆಯೆಂದು ವಿಜಿಲೆನ್ಸ್ ಅಧಿಕಾರಿಗಳು ತಿಳಿಸಿದ್ದಾರೆ.
ಜಿಲ್ಲೆಯ ಆರ್‌ಟಿಒ ಕಚೇರಿಗಳನ್ನು ಕೇಂದ್ರೀಕರಿಸಿ ವ್ಯಾಪಕವಾಗಿ ಭ್ರಷ್ಟಾಚಾರ ಹಾಗೂ ಅವ್ಯವಹಾರಗಳು ನಡೆಯುತ್ತಿವೆ ಎಂದು ಆರೋಪಿಸಿ ವಿಜಿಲೆನ್ಸ್ ವಿಭಾಗಕ್ಕೆ ಹಲವು ದೂರುಗಳು ಲಭಿಸಿತ್ತು. ಅದರ ಆಧಾರದಲ್ಲಿ ವಿಜಿಲೆನ್ಸ್ ತಂಡ ದಾಳಿ ನಡೆಸಿದೆ.
ಹೊಸದುರ್ಗ ಎಆರ್‌ಟಿಒ ಕಚೇರಿಗೆ ವಿಜಿಲೆನ್ಸ್ ಇನ್‌ಸ್ಪೆಕ್ಟರ್ ನಾರಾಯಣನ್ ಮತ್ತು ವೆಳ್ಳರಿಕುಂಡು ಎಆರ್‌ಟಿಎ ಕಚೇರಿಗೆ ಕಣ್ಣೂರು ವಿಜಿಲೆನ್ಸ್ ಇನ್‌ಸ್ಪೆಕ್ಟರ್ ಸುನಿಲ್ ಕುಮಾರ್ ನೇತೃತ್ವದಲ್ಲಿ ವಿಜಿಲೆನ್ಸ್ ತಂಡ ದಾಳಿ ಮತ್ತು ತಪಾಸಣೆ ನಡೆಸಿದೆ.






