ಸಂತಡ್ಕ ಶ್ರೀ ಅರಸು ಸಂಕಲ ಮಾಡದಲ್ಲಿ ರುದ್ರಯಾಗ, ಗಿರಿಜಾ ಕಲ್ಯಾಣೋತ್ಸವ ಇಂದಿನಿಂದ

ಉಪ್ಪಳ: ಸಂತಡ್ಕ ಮಾಡದ ಶ್ರೀ ಅರಸು ಸಂಕಲ ದೈವ ಕ್ಷೇತ್ರದಲ್ಲಿ ಶ್ರೀ ರುದ್ರಯಾಗ ಹಾಗೂ ಗಿರಿಜಾ ಕಲ್ಯಾಣೋತ್ಸವ ಮತ್ತು ನೂತನ ಭೋಜನ ಶಾಲೆಯ ಉದ್ಘಾಟನಾ ಸಮಾರಂಭ ಬ್ರಹ್ಮಶ್ರೀ ವೇದಮೂರ್ತಿ ಪರಕಜೆ ಅನಂತನಾರಾಯಣ ಭಟ್‌ರ ನೇತೃತ್ವದಲ್ಲಿ ಇಂದು ಮತ್ತು ನಾಳೆ ವಿವಿಧ ವೈದಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ. ಇಂದು ಸಂಜೆ 4ಕ್ಕೆ ಚಿಗುರುಪಾದೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಿಂದ ರುದ್ರಯಾಗ ಮತ್ತು ಶ್ರೀ ಗಿರಿಜಾ ಕಲ್ಯಾಣದಲ್ಲಿ ಪೂಜಿಸಲ್ಪಡುವ ಶ್ರೀ ದೇವರ ವಿಗ್ರಹದ ಭವ್ಯ ಶೋಭಾಯಾತ್ರೆ ಮೆರವಣಿಗೆಯೊಂದಿಗೆ ಉತ್ಸವಕ್ಕೆ ಚಾಲನೆ ದೊರೆಯಲಿದೆ. ಸಂಜೆ 5ಕ್ಕೆ ವೈದಿಕರ ಆಗಮನ, ಪ್ರಾರ್ಥನೆ ಹಾಗೂ ಯಾಗ ಮಂಟಪ ಶುದ್ಧೀಕರಣ ಪ್ರಕ್ರಿಯೆಗಳು ನೆರವೇರಲಿವೆ.
ನಾಳೆ ಬೆಳಿಗ್ಗೆ 6.30 ರಿಂದ ಗಣಹೋಮ, ಶ್ರೀ ದೈವಗಳಿಗೆ ವಿಶೇಷ ತಂಬಿಲ ಸೇವೆ ನಡೆಯಲಿದ್ದು, 8ಕ್ಕೆ ರುದ್ರಯಾಗ ಆರಂಭಗೊಳ್ಳಲಿದೆ. 11ಕ್ಕೆ ಪೂರ್ಣಾಹುತಿ, 11.30 ಕ್ಕೆ ನಡೆಯುವ ಧಾರ್ಮಿಕ ಸಭೆಯಲ್ಲಿ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹಾಗೂ ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಬ್ರಹ್ಮಶ್ರೀ ವೇದಮೂರ್ತಿ ನರಸಿಂಹ ತಂತ್ರಿ ಕುಡುಪು ಉಪಸ್ಥಿತರಿರುವರು. ಶ್ರೀ ಅರಸು ಸಂಕಲ ದೈವ ಕ್ಷೇತ್ರ ಆಡಳಿತ ಟ್ರಸ್ಟ್ ಅಧ್ಯಕ್ಷ ಡಾ. ಶ್ರೀಧರ ಭಟ್ ಸಂತಡ್ಕ ಅಧ್ಯಕ್ಷತೆ ವಹಿಸುವರು. ಈ ವೇಳೆ ಕ್ಷೇತ್ರದ ನೂತನ ಭೋಜನ ಶಾಲೆಯನ್ನು ಕರ್ನಾಟಕ ಸರಕಾರದ ಮಾನವ ಹಕ್ಕುಗಳ ಆಯೋಗದ ಪ್ರಭಾರ ಅಧ್ಯಕ್ಷ ಟಿ. ಶ್ಯಾಮ್ ಭಟ್ ಉದ್ಘಾಟಿಸುವರು. ಸಂಜೆ 5ರಿಂದ ಶ್ರೀ ಗಿರಿಜಾ ಕಲ್ಯಾಣೋತ್ಸವದ ಧಾರ್ಮಿಕ ವಿಧಿವಿಧಾನಗಳು ಆರಂಭಗೊಳ್ಳಲಿದ್ದು, 7.30 ಕ್ಕೆ ಅಷ್ಟಾವಧಾನ ಸೇವೆ ಹಾಗೂ ಮಹಾಪೂಜೆ ನೆರವೇರಲಿದೆ.

RELATED NEWS

You cannot copy contents of this page