ಕುಂಬಳೆ: ಭಾರೀ ಗಾಳಿ, ಮಳೆಗೆ ಬಂದ್ಯೋಡು ಶಿರಿಯದಲ್ಲಿ ಮನೆಯೊಂದು ಕುಸಿದಿದೆ. ಇದರಿಂದ ದಂಪತಿಗಳಿಗೆ ಗಾಯವುಂಟಾಗಿದೆ. ಶಿರಿಯ ಉನ್ನತಿಯ ತಿರುಮಲೇಶ್ ಹಾಗೂ ಪತ್ನಿ ಗಾಯಗೊಂಡವರು. ನಿನ್ನೆ ಮಧ್ಯಾಹ್ನ 12 ಗಂಟೆ ವೇಳೆ ಘಟನೆ ನಡೆದಿದೆ. ಈ ಪರಿಸರದಲ್ಲಿ ಬಲವಾಗಿ ಬೀಸಿದ ಸುಳಿಗಾಳಿಗೆ ಹಾಗೂ ಭಾರೀ ಮಳೆಗೆ ತಿರುಮಲೇಶರ ಹೆಂಚು ಹಾಸಿದ ಮನೆ ಸಂಪೂರ್ಣವಾಗಿ ಕುಸಿದಿದೆ. ಈ ವೇಳೆ ದಂಪತಿ ಮನೆಯೊಳಗಿದ್ದರು. ಪತ್ನಿಯ ಕಾಲಿಗೆ ಗಾಯವುಂಟಾಗಿದೆ. ಇವರನ್ನು ಕೂಡಲೇ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.
ದುರಂತ ಸಂಭವಿಸುವಾಗ ತಿರುಮಲೇಶರ ತಾಯಿ ಹಾಗೂ ಮಕ್ಕಳು ಮನೆಯಲ್ಲಿದ್ದರಾದರೂ ಅವರು ಅಪಾಯದಿಂದ ಪಾರಾಗಿದ್ದಾರೆ. ದೊಡ್ಡದೊಂದು ದುರಂತ ಕೂದಲೆಳೆ ಅಂತರದಲ್ಲಿ ಪಾರಾಗಿದೆ. ಮನೆ ಕುಸಿಯುವ ಶಬ್ದ ಕೇಳಿ ಸ್ಥಳಕ್ಕೆ ದಾವಿಸಿ ಬಂದ ಸ್ಥಳೀಯರು ರಕ್ಷಣಾಕಾರ್ಯದಲ್ಲಿ ನೆರವಾದರು. ದುರಂತದ ಮಾಹಿತಿ ತಿಳಿದು ವಾರ್ಡ್ ಪ್ರತಿನಿಧಿ ಸಹಿತದ ಪಂಚಾಯತ್ ಜನಪ್ರತಿನಿಧಿಗಳು ಸ್ಥಳ ಸಂದರ್ಶಿಸಿದ್ದಾರೆ. ಕುಟುಂಬಕ್ಕೆ ಅಗತ್ಯದ ಸಹಾಯ ಲಭಿಸುವಂತೆ ಮಾಡುವುದಾಗಿ ಅವರು ಭರವಸೆ ನೀಡಿದ್ದಾರೆ. ಮಳೆ ಹಾಗೂ ಗಾಳಿ ಮುಂದುವರಿಯುತ್ತಿರುವ ಹಿನ್ನೆಲೆಯಲ್ಲಿ ಜನರು ಜಾಗ್ರತೆ ಪಾಲಿಸ ಬೇಕೆಂದು ಅಧಿಕಾರಿಗಳು ಸೂಚಿಸಿದ್ದಾರೆ.






