ಕಾಸರಗೋಡು: 11ರ ಹರೆಯದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದ ಆರೋಪಿಯಾಗಿರುವ ನಿವೃತ್ತ ಸಬ್ ಇನ್ಸ್‌ಪೆಕ್ಟರ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಪರಿಯಾರಂ ಕಾಪುಮೈಲ್ ಇಳಯಡತ್ ನಿವಾಸಿ ಇ.ವಿ. ಗೋಪಿನಾಥನ್ (62) ಬಂಧಿತ ಆರೋಪಿ.
ಪರಿಯಾರಂ ಪೊಲೀಸ್ ಠಾಣೆ ವ್ಯಾಪ್ತಿಗೊಳಪಟ್ಟ ಪ್ರದೇಶದ 11ರ ಹರೆಯದ ಬಾಲಕಿಯನ್ನು ಮೊನ್ನೆ ಪುಸಲಾಯಿಸಿ ಆರೋಪಿ ಮನೆಗೆ ಕರೆತಂದು ಆಕೆಗೆ ಲೈಂಗಿಕ ಕಿರುಕುಳ ನೀಡಿರುವುದಾಗಿ ಆರೋಪಿಸಿ ನೀಡಲಾದ ದೂರಿನಂತೆ ಪರಿಯಾರಂ ಪೊಲೀಸರು ಗೋಪಿನಾಥನ್ ವಿರುದ್ಧ ಪೋಕ್ಸೋ ಕಾನೂನು ಪ್ರಕಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅದಕ್ಕೆ ಸಂಬಂಧಿಸಿ ಆತನನ್ನು ಬಂಧಿಸಿದ ನಂತರ ನ್ಯಾಯಾಲಯ ದಲ್ಲಿ ಹಾಜರುಪಡಿಸಿದ್ದಾರೆ. ಬಳಿಕ ನ್ಯಾಯಾಲಯದ ನಿರ್ದೇಶ ಪ್ರಕಾರ ಆತನನ್ನು ನ್ಯಾಯಾಂಗ ಬಂಧಿದಲ್ಲಿರಿಸಲಾಗಿದೆ.
ಲೈಂಗಿಕ ಕಿರುಕುಳಕ್ಕೊಳಗಾದ ಬಾಲಕಿ ಬಳಿಕ ದೈಹಿಕ ಅಸ್ವಸ್ಥತೆಯಿಂದ ಬಳಲುತ್ತಿರುವುದನ್ನು ಗಮನಿಸಿದ ತಾಯಿ ಆಕೆಯನ್ನು ವಿಚಾರಿಸಿದಾಗ ಆಕೆ ನಡೆದ ವಿಷಯವನ್ನು ತಿಳಿಸಿದ್ದಾಳೆ. ಮನೆಯವರು ಆ ಬಗ್ಗೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅದರಂತೆ ಪೊಲೀಸರು ಆಗಮಿಸಿ ಬಾಲಕಿಯ ಹೇಳಿಕೆ ದಾಖಲಿಸಿ, ಅದಕ್ಕೆ ಹೊಂದಿಕೊಂಡು ಪೋಕ್ಸೋ ಪ್ರಕರಣ ದಾಖಲಿಸಿದ್ದಾರೆ.






