ಕಾಸರಗೋಡು: ಒಂದೇ ಕುಟುಂಬಕ್ಕೆ ಸೇರಿದ ೧೫ರ ಹರೆಯದ ಬಾಲಕ ಸೇರಿದಂತೆ ಆರು ಮಂದಿಗೆ ಇರಿದು ಗಾಯಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿ ಕಾಸರಗೋಡು ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಕಾಸರಗೋಡು ಕೊರಕೋಡು ನಿವಾಸಿಗಳಾದ ಇಮ್ರಾನ್, ತಳಂಗರೆ ಬಾಂಗೋಡಿನ ಸನಾಫ್, ಕೊರಕೋಡಿನ ಅಹಮ್ಮದ್ ಮತ್ತು ಬಾಂಗೋಡನ ಬಾಸಿತ್ ಬಂಧಿತ ಆರೋಪಿಗಳು. ಇವರ ವಿರುದ್ಧ ಪೊಲೀಸರು ಕೊಲೆಯತ್ನ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಂಧಿತರನ್ನು ನಂತರ ನ್ಯಾಯಾಲಯದ ನಿರ್ದೇಶ ಪ್ರಕಾರ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ.
ಕೊರಕೋಡು ಬಿಲಾಲ್ ಮಸೀದಿ ಬಳಿಯ ಜಾಫರ್ ಸಾಧಿಕ್ (23), 15 ವರ್ಷದ ಸಹೋದರ ಮತ್ತು ಸಾಧಿಕ್ ತಂದೆ ಅಬ್ದುಲ್ ಕರೀಂ (50), ಸಂಬಂಧಿಕ ತಳಂಗರೆ ಸಿರಾಮಿಕ್ಸ್ ರಸ್ತೆ ಬಳಿಯ ಅಹಮ್ಮದ್ ಶಹೀದ್ (17), ಕೊರಕೋಡು ಬಿಲಾಲ್ ನಗರ ರಿಯಾನ್ ಮಂಜಿಲ್ನ ಅಬ್ದುಲ್ ಫತಾಹ್ ಕೆ (34) ಮತ್ತು ಸಿರಾಮಿಕ್ ರೋಡ್ ಮಹಸ್ಸೂದ್ ಮಂಜಿಲ್ನ ಮುಹಮ್ಮದ್ ಮರ್ವಾನ್ ಮನಾಸಿರ್ (23) ಎಂಬಿವರಿಗೆ ಇರಿದು ಗಾಯಗೊಳಿಸಿರುವುದಾಗಿ ಆರೋಪಿಸಿ ಗಾಯಾಳುಗಳಲ್ಲೋರ್ವನಾಗಿರುವ ಜಾಫರ್ ಸಾದಿಕ್ ನೀಡಿದ ದೂರಿನಂತೆ ಮೇಲಿನ ನಾಲ್ವರು ಆರೋಪಿಗಳ ವಿರುದ್ಧ ಕಾಸರಗೋಡು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮೊನ್ನೆ ರಾತ್ರಿ 7.30ರ ವೇಳೆ ಕೊರಕೋಡಿನ ಅಂಗಡಿಯೊಂದರ ಸಮೀಪ ಈ ಇರಿತ ಪ್ರಕರಣ ನಡೆದಿದೆ. ಈ ಪ್ರಕರಣದ ದೂರಗಾರ ಜಾಫರ್ ಸಾಧಿಕ್ ಗಲ್ಫ್ ನಿಂದ ಕಳುಹಿಸಿಕೊಟ್ಟ ಎಂಟು ಪವನ್ ಚಿನ್ನದೊಡವೆ ಪ್ರಕರಣದ ಮೂರನೇ ಆರೋಪಿಗೆ ಕಳುಹಿಸಿ ಕೊಟ್ಟಿದ್ದರೆಂದೂ, ಅದರಲ್ಲಿದ್ದ 30 ಗ್ರಾಂ ಚಿನ್ನದ ಉಂಗುರವನ್ನು ದೂರೂಗಾರನಿಗಾಗಲೀ, ಆತನ ಮನೆಯವರಾಗಲೀ ಹಿಂತಿರುಗಿಸಿರಲಿಲ್ಲವೆಂದೂ ಅದನ್ನು ದೂರುಗಾರನ ತಂದೆ ಪ್ರಶ್ನಿಸಿದ್ದರು. ಆ ದ್ವೇಷವೇ ಇರಿತಕ್ಕೆ ಕಾರಣವೆಂದು ಪೊಲೀಸರಿಗಗೆ ನೀಡಿದ ದೂರಿನಲ್ಲಿ ಆರೋಪಿಸಲಾಗಿದೆ.






