ಕುಂಬಳೆ: ಕುಂಬಳೆ ಜಿಎಸ್‌ಬಿಎಸ್ ಶಾಲೆಯ ಬಹು ಅಂತಸ್ತಿನ ಕಟ್ಟಡವನ್ನು ರಾಜ್ಯ ಶಿಕ್ಷಣ ಸಚಿವ ಎನ್. ಶಂಸುದ್ದೀನ್ ಇಂದು ಬೆಳಿಗ್ಗೆ ಉದ್ಘಾಟಿಸಿದರು. ಇದೇ ವೇಳೆ ವಿ.ಡಿ. ಸಾವರ್ಕರ್‌ರನ್ನು ಸಚಿವರು ಅವಮಾನಿಸಿದ್ದಾರೆಂದೂ ಆದ್ದರಿಂದ ಅವರು ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ಬಿಜೆಪಿ ಸಚಿವರು ಭಾಗವಹಿಸಿದ ಕಾರ್ಯಕ್ರಮಕ್ಕೆ ಪ್ರತಿಭಟನಾ ಮೆರವಣಿಗೆ ನಡೆಸಿತು. ಇದೇ ವೇಳೆ ಬಿಜೆಪಿ ವಿರುದ್ಧ ಯೂತ್ ಲೀಗ್ ಕಾರ್ಯಕರ್ತರು ರಂಗಕ್ಕಿಳಿದಿದ್ದು ಇದರಿಂದ ಸ್ಥಳದಲ್ಲಿ ಸಂಘರ್ಷಾವಸ್ಥೆ ಸೃಷ್ಟಿಯಾಗಿದೆ. ಸಚಿವರು ಶಾಲಾ ಕಟ್ಟಡವನ್ನು ಉದ್ಘಾಟಿಸಿ ಮಾತನಾ ಡುತ್ತಿದ್ದಂತೆಯೇ ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ಅವರ ನೇತೃತ್ವದಲ್ಲಿ ಕಾರ್ಯಕರ್ತರು ಪಾಲ್ಗೊಂಡ ಬೃಹತ್ ಪ್ರತಿಭಟನಾ ಮೆರವಣಿಗೆ ಅಲ್ಲಿಗೆ ತಲುಪಿತ್ತು. ಅದನ್ನು ಯೂತ್ ಲೀಗ್ ಕಾರ್ಯಕರ್ತರು ತಡೆಯಲೆತ್ನಿಸಿದ್ದು, ಈ ವೇಳೆ ಸಂಘರ್ಷಾವಸ್ಥೆ ಸೃಷ್ಟಿಗೆ ಸಾಧ್ಯತೆ ಉಂಟಾಗಿತ್ತು. ಇದನ್ನು ಮನಗಂಡು ಸ್ಥಳದಲ್ಲಿದ್ದ ಪೊಲೀಸರು ಬಿಜೆಪಿ ಹಾಗೂ ಯೂತ್ ಲೀಗ್ ಕಾರ್ಯಕರ್ತರ ಮಧ್ಯೆನಿಂತು ಘರ್ಷಣೆಯನ್ನು ತಡೆದಿದ್ದಾರೆ. ಇದೇ ವೇಳೆ ಸಚಿವರು ಭಾಗವಹಿಸುವ ಕಾರ್ಯಕ್ರಮಕ್ಕೆ ಬೆರಳೆಣಿಕೆಯ ಪೊಲೀಸರು ಮಾತ್ರವೇ ಭದ್ರತೆಗಾಗಿ ನೇಮಕಗೊಂಡಿದ್ದರೆಂಬ ಆರೋಪವೂ ಉಂಟಾಗಿದೆ. ಕುಂಬಳೆ ಸರಕಾರಿ ಸೀನಿ ಯರ್ ಬೇಸಿಕ್ ಶಾಲೆಯಲ್ಲಿ ಕಿಫ್‌ಬಿ-ಕಿಲಾ ಯೋಜನೆಯಲ್ಲಿ ಒಳಪಡಿಸಿ ನಿರ್ಮಿಸಿದ ನೂತನ ಬಹುಅಂತಸ್ಥಿನ ಕಟ್ಟಡವನ್ನು ಇಂದು ಉದ್ಘಾಟಿಸಲಾಗಿದೆ.







