ಪ್ಲಸ್‌ಟು ವಿದ್ಯಾರ್ಥಿನಿ, ತಂದೆಯ ಆತ್ಮಹತ್ಯೆ: ಮುಂದುವರಿದ ನಿಗೂಢತೆ

ಕಾಸರಗೋಡು: ತಂದೆ ಹಾಗೂ ಪ್ಲಸ್‌ಟು ವಿದ್ಯಾರ್ಥಿನಿಯಾದ ಪುತ್ರಿ ಬಾಡಿಗೆ ಮನೆಯಲ್ಲಿ ನೇಣುಬಿಗಿದು ಸಾವಿಗೀಡಾದ ಘಟನೆಯಲ್ಲಿ ನಿಗೂಢತೆ ಮುಂದುವರಿದಿದೆ. ತಂದೆ ಹಾಗೂ ಮಗಳು ಯಾಕಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ತಿಳಿದುಬಂದಿಲ್ಲ. ಈ ಘಟನೆಯಿಂದ ನಾಡಿನಲ್ಲಿ ಶೋಕಸಾಗರ ಸೃಷ್ಟಿಯಾಗಿದೆ.  

 ಕರ್ನಾಟಕ ನಿವಾಸಿಯೂ  ಕಾಸರಗೋಡು ಮೀಪುಗುರಿಯಲ್ಲಿ ವಾಸಿಸುತ್ತಿದ್ದ ಗಣೇಶ (55) ಹಾಗೂ ಪರವನಡ್ಕ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ  ಪ್ಲಸ್‌ಟು ವಿದ್ಯಾರ್ಥಿನಿಯಾದ ಪುತ್ರಿ ವೈಷ್ಣವಿ (17) ಎಂಬಿವರು ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಮೊನ್ನೆ ರಾತ್ರಿ ಪತ್ತೆಯಾಗಿದ್ದಾರೆ. ಚೆಮ್ನಾಡ್ ಕೋಳಿಯಡ್ಕ ಶಿವಪುರಂ  ಕ್ಷೇತ್ರ ಸಮೀಪದ  ಎರಡಂತಸ್ತಿನ ಬಾಡಿಗೆ ಮನೆಯಲ್ಲಿ ಇವರ ಮೃತದೇಹ ಪತ್ತೆಯಾಗಿದೆ.  ಗಣೇಶರ ಪತ್ನಿ ಓಮನ  ಹೋಂ ನರ್ಸ್ ಆಗಿದ್ದು ಇವರು  ಘಟನೆ ವೇಳೆ ಮನೆಯಲ್ಲಿರಲಿಲ್ಲ.  ಪುತ್ರ ವಿಷ್ಣು ಕೆಟರಿಂಗ್ ಕೆಲಸಕ್ಕೆ ತೆರಳಿದ್ದನೆಂದು ಹೇಳಲಾಗುತ್ತಿದೆ. 

 ಶನಿವಾರ ರಾತ್ರಿ 11.10ರ ವೇಳೆ  ನೆರೆಮನೆಗೆ ತೆರಳಿದ ಗಣೇಶ ಪುತ್ರಿ ನಾಪತ್ತೆಯಾಗಿರುವುದಾಗಿ ತಿಳಿಸಿದ್ದರೆನ್ನಲಾಗಿದೆ. ಅನಂತರ ಮನೆಗೆ ಮರಳಿದ ಗಣೇಶ  ಕೊಠಡಿಯೊಳಗೆ ತೆರಳಿ ಬಾಗಿಲು ಹಾಕಿದ್ದರು. ಇದರಿಂದ ಸಂಶಯಗೊಂಡ ನೆರೆಮನೆ ನಿವಾಸಿಗಳು ಈ ವಿಷಯವನ್ನು ಮೇಲ್ಪರಂಬ ಪೊಲೀಸರಿಗೆ ತಿಳಿಸಿದ್ದರ. ಪೊಲೀಸರು ತಲುಪಿದಾಗ ಮನೆಯ ಬಾಗಿಲಿಗೆ ಒಳಗಿನಿಂದ ಚಿಲಕ ಹಾಕಲಾಗಿತ್ತು. ಪೊಲೀಸರು  ಬಾಗಿಲು ಮುರಿದು ಒಳಗೆ ಪ್ರವೇಶಿಸಿ ನೋಡಿದಾಗ ಗಣೇಶ ಹಾಗೂ ಪುತ್ರಿ ವೈಷ್ಣವಿ ಒಂದೇ ಫ್ಯಾನ್‌ನ ಕೊಂಡಿಗೆ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.  ನಿನ್ನೆ ಬೆಳಿಗ್ಗೆ  ಮೃತದೇಹಗಳ ಮಹಜರು ನಡೆಸಿ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು.  ಅನಂತರ ಸಾರ್ವ ಜನಿಕ ಸ್ಮಶಾನದಲ್ಲಿ ಅಂತ್ಯಸಂಸ್ಕಾರ ನಡೆಸಲಾಯಿತು.

ಪ್ಲಸ್‌ಟು ಸಯನ್ಸ್ ವಿದ್ಯಾರ್ಥಿನಿ ಯಾದ ವೈಷ್ಣವಿ ಕಲಿಕೆಯಲ್ಲಿ  ಮುಂದಿದ್ದಳು. ಆದರೆ ಈಕೆ ಯಾಕಾಗಿ ಸಾವಿಗೆ ಶರಣಾಗಿದ್ದಾಳೆಂದು ತಿಳಿದು ಬಂದಿಲ್ಲ.  ಘಟನೆ ಬಗ್ಗೆ ಮೇಲ್ಪರಂಬ  ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಗಣೇಶರಿಗೆ ವಿಷ್ಣುಪ್ರಿಯಾ ಎಂಬ ಇನ್ನೋರ್ವೆ ಮಗಳಿದ್ದಾಳೆ.  ತಂದೆ ಹಾಗೂ ಪುತ್ರಿ ಆತ್ಮಹತ್ಯೆ ಗೈದ ಮನೆಯಲ್ಲಿ ಈ ಹಿಂದೆಯೂ ಇಬ್ಬರು ಆತ್ಮಹತ್ಯೆಗೈದಿದ್ದರೆಂದು  ಪೊಲೀಸರು ತಿಳಿಸುತ್ತಾರೆ. ೨೦೨೫ ಆಗೋಸ್ತ್ ೧೩ರಂದು ಓರ್ವ ಯುವಕ ಹಾಗೂ ಮೂರು ತಿಂಗಳ ಬಳಿಕ ಈ ಯುವಕನ ತಂದೆಯೂ ಇಲ್ಲಿ ಸಾವಿಗೆ ಶರಣಾಗಿದ್ದಾರೆಂದು ಹೇಳಲಾಗುತ್ತಿದೆ.

You cannot copy contents of this page