ಕಾಸರಗೋಡು: ಪ್ರಯಾಣಿಕರ ದಟ್ಟಣೆ ಹೆಚ್ಚಿರುವ ಜಿಲ್ಲೆಯಲ್ಲಿ ಹಬ್ಬದ ಸಂದರ್ಭಗಳಲ್ಲಿ ಹೆಚ್ಚಿನ ಪ್ಯಾಸೆಂಜರ್, ಮೆಮು ರೈಲು ಸೇವೆಗಳನ್ನು ಒದಗಿಸಲು ಹಾಗೂ ಪ್ರಸ್ತುತ ಸಂಚರಿಸುತ್ತಿರುವ ವಿವಿಧ ರೈಲುಗಳಿಗೆ ತುರ್ತಾಗಿ ತಾತ್ಕಾಲಿಕ ನಿಲುಗಡೆಗಳನ್ನು ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದೆಂದು ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ತಿಳಿಸಿದ್ದಾರೆ.
ಓಣಂ, ಶ್ರೀಕೃಷ್ಣ ಜನ್ಮಾಷ್ಟಮಿ, ಗಣೇಶ ಚತುರ್ಥಿ ಮುಂತಾದ ಹಬ್ಬಗಳ ಅಂಗವಾಗಿ ಮುಂಬರುವ ಒಂದು ತಿಂಗಳ ಅವಧಿಯಲ್ಲಿ ರೈಲು ಪ್ರಯಾಣಿಕರ ಸಂಖ್ಯೆ ಏರಿಕೆಯಾಗುವ ಸಾಧ್ಯತೆ ಇದ್ದು, ಇದನ್ನು ಪರಿಗಣಿಸಿ ವಿವಿಧ ರೈಲುಗಳಿಗೆ ತಾತ್ಕಾಲಿಕ ನಿಲುಗಡೆ ನೀಡುವಂತೆ ಒತ್ತಾಯಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. ಇದರಂಗವಾಗಿ ಕೇಂದ್ರ ರೈಲ್ವೇ ಇಲಾಖೆ ಹಾಗೂ ಬಿಜೆಪಿ ರಾಜ್ಯ, ರಾಷ್ಟ್ರೀಯ ನಾಯಕತ್ವಕ್ಕೆ ಮನವಿ ಸಲ್ಲಿಸಲಾಗುವುದೆಂದು ಅಶ್ವಿನಿ ತಿಳಿಸಿದ್ದಾರೆ.







