ಗೋಣಿಚೀಲದಲ್ಲಿ ಮೃತದೇಹ ಪತ್ತೆ: ನಾಪತ್ತೆಯಾದ ಮಹಿಳೆಯದ್ದಾಗಿರಬೇಕೆಂಬ ಶಂಕೆ; ಪತಿ ನಾಪತ್ತೆ

ಮಲಪ್ಪುರಂ: ತಿರೂರು ಹೊಳೆ ಸಮೀಪ ಗೋಣಿಚೀಲದಲ್ಲಿ ಕಟ್ಟಿ ಇರಿಸಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಕಲ್ಲುಕಟ್ಟಿ ಮುಳುಗಿಸಿಟ್ಟ ರೀತಿಯಲ್ಲಿ ಮಹಿಳೆಯ ಮೃತದೇಹ ಪತ್ತೆಯಾಗಿದೆ. ನಿನ್ನೆ ಮಧ್ಯಾಹ್ನ ಮೀನುಗಾರಿಕೆಗೆ ಹೋಗಲಿದ್ದ ‘ಸಮರ್‌ಕಂದ್’ ಎಂಬ ದೋಣಿಯ ಕಾರ್ಮಿಕರು ಈ ಗೋಣಿ ಚೀಲವನ್ನು ಪತ್ತೆಹಚ್ಚಿದ್ದಾರೆ. ಅದರೊಳಗೆ ಮನುಷ್ಯರ ಶರೀರವಿದೆಯೆಂದು ಖಚಿತವಾದ ಬಳಿಕ ಮೀನು ಕಾರ್ಮಿಕರು ತಿರೂರು ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ತಲುಪಿ ಪರಿಶೀಲಿಸಿದಾಗ ಗೋಣಿಚೀಲದೊಳಗೆ ಮೃತದೇಹವನ್ನು ಪತ್ತೆಹಚ್ಚಲಾಗಿದೆ.

ಇತ್ತೀಚೆಗೆ ನಾಪತ್ತೆಯಾದ ಪಡಿಞಾರೆಕರೆ ಬೀಚ್ ನಿವಾಸಿ ಫೌಸಿಯ (37)ರ ಮೃತದೇಹವಿದಾಗಿರಬೇಕೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಮಹಜರು ಕ್ರಮಗಳನ್ನು ಪೂರ್ತಿಗೊಳಿಸಿದ ಬಳಿಕ ಮೃತದೇಹವನ್ನು ಮುಂದಿನ ತಪಾಸಣೆಗಾಗಿ ತಿರೂರು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಬುಧವಾರ ರಾತ್ರಿಯಿಂದ ಫೌಸಿಯ ಪತಿ ಅಂಡಿಪಾಟಿಲ್ ನಿವಾಸಿ ಹುಸೈನ್‌ರ ಜೊತೆಯಲ್ಲಿ ನಾಪತ್ತೆಯಾಗಿದ್ದರು. ಹುಸೈನ್ ರಾತ್ರಿ ವೇಳೆ ಫೌಸಿಯರನ್ನು ಮನೆಯಿಂದ ಕರೆದೊಯ್ದಿರುವುದಾಗಿ ಸಂಬಂಧಿಕರು ತಿಳಿಸಿದ್ದಾರೆ. ಘಟನೆಯಲ್ಲಿ ತಿರೂರು ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ನಾಪತ್ತೆಯಾದ ಪತಿ ಹುಸೈನ್‌ಗಾಗಿ ಹುಡುಕಾಟ ನಡೆಸಲಾಗುತ್ತಿದೆ.

RELATED NEWS

You cannot copy contents of this page