ಕಣ್ಣೂರು: ರಸ್ತೆ ಬದಿ ನಿಲ್ಲಿಸಿದ್ದ ಲಾರಿಗೆ ಮಿಕ್ಸರ್ ಹೆವ್ವೀ ಲಾರಿ ಢಿಕ್ಕಿ ಹೊಡೆದು ಬೆಂಕಿ ಎದ್ದು ಇಬ್ಬರು ಸಜೀವ ದಹನಗೊಂಡ ಘಟನೆ ಕಣ್ಣೂರಿನಲ್ಲಿ ಇಂದು ಮುಂಜಾನೆ ನಡೆದಿದೆ.
ಹೊಸದುರ್ಗ ಮಾವುಂಗಾಲ್ ನಿವಾಸಿ ಇಬಿನೈಸರ್ ಆಂಟೋ (24) ಮತ್ತು ಪಾಲಕ್ಕಾಡ್ ನಿವಾಸಿ ಮುಹಮ್ಮದ್ ಶೆಬಿನ್ (22) ಸಾವನ್ನಪ್ಪಿದ ದುರ್ದೈವಿಗಳು. ಕಣ್ಣೂರು ಪಿಲಾತ್ತರ ಮಂಡೂರು ರಾಜ್ಯ ಹೆದ್ದಾರಿಯ ಮಂಡೂರು ಮಸೀದಿ ಬಳಿ ಇಂದು ಮುಂಜಾನೆ 3.25ಕ್ಕೆ ದುರ್ಘಟನೆ ನಡೆದಿದೆ. ಪಳಯಂಗಾಡಿಯಿಂದ ಬರುತ್ತಿದ್ದ ಲಾರಿಯ ಕ್ಲಚ್ ಕೆಟ್ಟುಹೋದ ಪರಿಣಾಮ ಅದನ್ನು ನಿನ್ನೆ ಮಧ್ಯಾಹ್ನ ರಸ್ತೆ ಬದಿ ನಿಲ್ಲಿಸಲಾಗಿತ್ತು. ಅದನ್ನು ಸರಿಪಡಿಸಲೆಂದು ಇಂದು ಮುಂಜಾನೆ ಹೊಸದುರ್ಗದಿಂದ ಮೆಕಾನಿಕ್‌ಗಳು ಬಂದು ಲಾರಿಯ ಕ್ಯಾಬಿನ್‌ನ ಅಡಿಭಾಗವನ್ನು ಪರಿಶೀಲಿಸುತ್ತಿದ್ದ ವೇಳೆ ಆ ಲಾರಿಗೆ ಪಿಲಾತ್ತರದಿಂದ ಅಪಮಿತ ವೇಗದಲ್ಲಿ ಬಂದ ಮಿಕ್ಸರ್‌ಹೆವ್ವಿ ಲಾರಿ ಢಿಕ್ಕಿ ಹೊಡೆದಿದೆ. ಅದರ ಆಘಾತಕ್ಕೆ ಬೆಂಕಿ ಎದ್ದು ಅದು ಇಡೀ ಲಾರಿಗೆ ವ್ಯಾಪಿಸಿದೆ. ಮಾತ್ರವಲ್ಲ ದುರಸ್ತಿ ಕೆಲಸ ನಿರ್ವಹಿಸಲು ಬಂದ ಮೆಕ್ಯಾನಿಕ್‌ಗಳ ವಾಹನಕ್ಕೂ ಬೆಂಕಿ ಆವರಿಸಿದೆ. ಢಿಕ್ಕಿ ಹೊಡೆದ ಸದ್ದು ಕೇಳಿ ಪರಿಸರ ನಿವಾಸಿಗಳು ಅಲ್ಲಿಗೆ ಬಂದರು. ನಂತರ ಅಗ್ನಿಶಾಮಕದಳ ಆಗಮಿಸಿ ಬೆಂಕಿ ತಗಲಿ ಸಜೀವ ದಹನಗೊಂಡ ಇಬ್ಬರ ಮೃತದೇಹಗಳನ್ನು ಹೊರತೆಗೆದು ಅದನ್ನು ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸಾಗಿಸಿದರು. ಈ ಅನಾಹುತದಲ್ಲಿ ಮಿಕ್ಸರ್‌ಹೆವ್ವಿ ಲಾರಿಯ ಚಾಲಕ ಇಡುಕ್ಕಿ ನಿವಾಸಿ ವಿಮಲ್ (26) ಕೂಡಾ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಲಾರಿಗಳ ಢಿಕ್ಕಿಯ ರಭಸಕ್ಕೆ ಅಲ್ಲೇ ಪಕ್ಕದ ಮಸೀದಿಯ ಗೋಡೆ ಬಿರುಕು ಉಂಟಾಗಿದೆ. ಸುಮಾರು ಒಂದುಗಂಟೆ ತನಕ ಲಾರಿ ರಸ್ತೆಯಲ್ಲೇ ಉರಿದು ಕರಕಲುಗೊಂಡಿದೆ.






