ಕುಂಬಳೆ ಪಂ. ಓಣಂ ಆಚರಣೆ ಲೀಗ್ ಕಾರ್ಯಕರ್ತನ ಮನೆಯಲ್ಲಿ  ತೀವ್ರಗೊಂಡ ವಿವಾದ; ಬಿಜೆಪಿಯಲ್ಲೂ ಪ್ರತಿಭಟನೆ

ಕುಂಬಳೆ: ಕುಂಬಳೆ ಪಂಚಾಯತ್‌ನ ಓಣಂ ಆಚರಣೆ ವಿವಾದಕ್ಕೆಡೆಯಾಗಿದೆ.

ಓಣಂ ಆಚರಣೆ 23ರಂದು ನಡೆಸುವುದಾಗಿ ಪೋಸ್ಟರ್ ಸಿದ್ಧಪಡಿಸಿದ್ದರೂ ಅದಕ್ಕೆ  ಸ್ಥಳ ಎಲ್ಲಿ ಎಂದು ತಿಳಿಸಿರಲಿಲ್ಲ. ಕಾರ್ಯಕ್ರಮ ನಡೆಯುವ ಸ್ಥಳವನ್ನು  ಕೊನೆಯವರೆಗೆ ಗೌಪ್ಯವಾಗಿರಿಸಿದ ಪಂಚಾಯತ್ ಅಧಿಕಾರಿಗಳು ಕೊನೆಗೆ ನಿನ್ನೆ ಬೆಳಿಗ್ಗೆ ಪಂಚಾಯತ್ ಸದಸ್ಯನೂ ಅಲ್ಲದ ಲೀಗ್ ಕಾರ್ಯಕರ್ತನ ಮನೆಯಲ್ಲಿ ಓಣಂ ಆಚರಣೆ ನಡೆಸಿರುವುದಾಗಿ ಲೀಗ್ ಕಾರ್ಯಕರ್ತರು ತಿಳಿಸಿದ್ದಾರೆ.

ಪಂಚಾಯತ್ ಕಚೇರಿಯಲ್ಲಿ ವಿಶಾಲವಾದ ಸಭಾಂಗಣ ಸಹಿತ ಸೌಕರ್ಯವಿರುವಾಗ ಪಂಚಾಯತ್‌ಗೆ ಸಂಬಂಧಪಟ್ಟ ಹಲವು ವಿವಾದಗಳಲ್ಲಿ ಸಿಲುಕಿಕೊಂಡಿರುವ ಮರ್ಚೆಂಟ್ಸ್ ಅಸೋಸಿಯೇಶನ್ ಘಟಕ ಕಾರ್ಯದರ್ಶಿಯ  ಮನೆಯಲ್ಲಿ ಪಂಚಾಯತ್‌ನ ಓಣಂ ಆಚರಣೆ ನಡೆಸಿರುವುದು ಉತ್ತಮ ಕ್ರಮವಲ್ಲವೆಂದು ಲೀಗ್ ಕಾರ್ಯಕರ್ತರು ತಿಳಿಸುತ್ತಿದ್ದಾರೆ.

ಪಂಚಾಯತ್ ನೇತೃತ್ವದಲ್ಲಿ ಓಣಂ ಆಚರಣೆ ನಡೆಯಲಿದೆಯೆಂದು ವಾಟ್ಸಪ್ ಮೂಲಕ ಪ್ರಚಾರ ನಡೆಸಿದ ಸಂಘಾಟಕರು  ಕಾರ್ಯಕ್ರಮ ಎಲ್ಲಿ ನಡೆಯಲಿದೆ ಎಂಬುವುದನ್ನು ಕೊನೆಯ ಕ್ಷಣದವರೆಗೆ ಬಹಿರಂಗಪಡಿಸಿರಲಿಲ್ಲವೆಂದು  ಪಂಚಾಯತ್ ಸದಸ್ಯರು ತಿಳಿಸಿದ್ದಾರೆ. ಈ ಬಗ್ಗೆ ವಿಚಾರಿಸಿದಾಗ ರೆಸಾರ್ಟ್ನಲ್ಲಿ, ಅತಿಥಿಗೃಹದಲ್ಲಿ ಎಂದು ತಿಳಿಸಿರುವುದಾಗಿಯೂ ಅವರು ಆರೋಪಿಸಿದ್ದಾರೆ. ಆದರೆ ನಿನ್ನೆ ಬೆಳಿಗ್ಗೆಯೇ ಓಣಂ ಕಾರ್ಯಕ್ರಮ ಸತ್ತಾರ್‌ರ ಮನೆಯಲ್ಲಿ ಎಂಬುವುದಾಗಿ ತಿಳಿಸಲಾಗಿದೆ.

ಪಂಚಾಯತ್ ಕಚೇರಿಯಲ್ಲಿ ನಡೆಸಬೇಕಾದ ಕಾರ್ಯಕ್ರಮವನ್ನು ಪಂಚಾಯತ್‌ಗೆ ಯಾವುದೇ ಸಂಬಂಧವಿಲ್ಲದ ವ್ಯಕ್ತಿಯ ಮನೆಯಲ್ಲಿ ನಡೆಸಿರುವುದು ಉತ್ತಮವಲ್ಲ ಎಂದು ತಿಳಿಸಿದ ಬಳಿಕ ಸ್ಥಳಕ್ಕೆ ತಲುಪಿದ ಬಿಜೆಪಿ ನೇತಾರರು ಹಾಗೂ ಪಂಚಾಯತ್ ಸದಸ್ಯರಾದ ಕಾಂಚಾರ, ಅಜಿತ್ ಕುಮಾರ್ ಎಂಬಿವರು ಕಾರ್ಯಕ್ರಮದಲ್ಲಿ ಭಾಗವಹಿಸದೆ ಅಲ್ಲಿಂದ ಮರಳಿದರು. ಇದೇ ವೇಳೆ ಬಿಜೆಪಿಯ ಇತರ  ಮೂವರು ಪಂಚಾಯತ್ ಸದಸ್ಯರಾದ ರಮೇಶ್ ಭಟ್, ಅಮಿತ, ಶಾರದ ಎಂಬಿವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ನೌಕರರ ಹಾಗೂ ಇತರರ ಒಪ್ಪನ, ಹೂ ರಂಗೋಲಿ ಮೊದಲಾದ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಓಣಂ ಭೋಜನ ಉಂಡು ಮರಳಿದರು ಎನ್ನಲಾಗುತ್ತಿದೆ. ಇದು ಬಿಜೆಪಿ ಕಾರ್ಯಕರ್ತರಲ್ಲಿ ರೋಷ ಮೂಡಿಸಿದೆ.

ಪಂಚಾಯತ್ ಕಚೇರಿಯಲ್ಲಿ ನಡೆಸಬೇಕಾದ ಕಾರ್ಯಕ್ರಮವನ್ನು ಮರ್ಚೆಂಟ್ಸ್ ಸೊಸೈಟಿ ಹಾಗೂ ಅನಧಿಕೃತ ಶಾಪಿಂಗ್ ಕಾಂಪ್ಲೆಕ್ಸ್‌ಗೆ ಸಂಬಂಧಪಟ್ಟು ಆರೋಪಕ್ಕೆಡೆಯಾದ ವ್ಯಕ್ತಿಯ ಮನೆಯಲ್ಲಿ ನಡೆಸಿದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಹೊಟ್ಟೆ ತುಂಬಿಸಿಕೊಂಡ ಸದಸ್ಯರನ್ನು ಬಿಜೆಪಿಯಿಂದ ಹೊರಹಾಕಬೇಕೆಂದು ಪಕ್ಷದೊಳಗೂ ಒತ್ತಾಯ ಕೇಳಿಬಂದಿದೆ.  ತಿನ್ನಲು ಸಿಗುವಲ್ಲಿಗೆ ಓಡಿ ತಲುಪುವ ಸದಸ್ಯರ ನಿಲುವು ಕಳೆದ ಪಂಚಾಯತ್ ಆಡಳಿತ ಸಮಿತಿಯಲ್ಲಿದ್ದ ಒಂಭತ್ತು ಸದಸ್ಯರಿದ್ದ ಬಿಜೆಪಿಗೆ ಈಗಿನ ಪಂಚಾಯತ್  ಆಡಳಿತ ಸಮಿತಿಯಲ್ಲಿ  ಸದಸ್ಯರ ಸಂಖ್ಯೆ ೫ ಆಗಿ ಕುಸಿದಿದೆಯೆಂದೂ ಕಾರ್ಯಕರ್ತರು ಹೇಳುತ್ತಿದ್ದಾರೆ.

ಕಳೆದ ಪಂಚಾಯತ್ ಆಡಳಿತ ಸಮಿತಿ ನಿರ್ಮಿಸಿದ ಹೊಸ ಬಸ್ ನಿಲ್ದಾಣ ಹಾಗೂ ಅದರ ವಿರುದ್ಧ  ವಿವಾದಗಳು ಹುಟ್ಟಿಕೊಂಡಿರುವಾಗ ಅಂದಿನ ಆಡಳಿತ ಸಮಿತಿಯ ಕೊನೆಯ ಸಭೆ ಕೊನೆಗೊಂಡ ಬಳಿಕ ಏರ್ಪಡಿಸಿದ ಹೋಟೆಲ್ ಭೋಜನದಲ್ಲೂ ಕೆಲವು ಬಿಜೆಪಿ ಸದಸ್ಯರು ಪಾಲ್ಗೊಂಡಿರುವುದು ಭಾರೀ ವಿವಾದಕ್ಕೆ ಕಾರಣವಾಗಿತ್ತು.  ಇದೇ ವೇಳೆ ನಿನ್ನೆ ನಡೆದ ಓಣಂ ಭೋಜನದಲ್ಲಿ ಆಡಳಿತ ಪಕ್ಷದ ಸದಸ್ಯರ ಪೈಕಿ ಹಲವರು ಪಾಲ್ಗೊಂಡಿಲ್ಲವೆಂದೂ ಹೇಳಲಾಗುತ್ತಿದೆ. ಪಂಚಾಯತ್‌ಗೆ ಸಂಬಂಧವುಳ್ಳ  ಕಾರ್ಯಕ್ರಮವನ್ನು ಪಂಚಾಯತ್ ಕಚೇರಿಯಲ್ಲಿ ನಡೆಸಲು ಆಸಕ್ತಿ ಇಲ್ಲದವರಿಗೆ ಪಂಚಾಯತ್ ಹಾಗೂ ಜನರೊಂದಿಗಿರುವ ಕಾಳಜಿ ಏನೆಂದು ತಿಳಿಯಬೇಕೆಂದು ಆಡಳಿತ ಪಕ್ಷದಲ್ಲೇ ಒತ್ತಾಯ ಕೇಳಿಬಂದಿದೆಯೆಂದೂ ಹೇಳಲಾಗುತ್ತಿದೆ.

ಕುಂಬಳೆ ಪೇಟೆಯಲ್ಲಿ ನಿರ್ಮಿಸಿದ ವಿವಾದಿತ ಶಾಪಿಂಗ್ ಕಾಂಪ್ಲೆಕ್ಸ್‌ನ ಕುರಿತು ತನಿಖೆ ನಡೆಸುತ್ತಿರುವಂತೆಯೇ ನೌಕರರನ್ನು ಜತೆಗೆ ಉಳಿಸಿಕೊಳ್ಳಲು ಪಂಚಾಯತ್ ಓಣಂ ಆಚರಣೆಯನ್ನು ಖಾಸಗಿ ವ್ಯಕ್ತಿಯ ಮನೆಯಲ್ಲಿ ನಡೆಸಿರುವುದಾಗಿ ಆರೋಪ ಕೇಳಿಬಂದಿದೆ.

RELATED NEWS

You cannot copy contents of this page